ಹೊಸದಿಲ್ಲಿ: ಪ್ರಧಾನಿ ಮೋದಿಯವರಿಗೆ ಭ್ರಷ್ಟಾಚಾರದ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಮತ್ತು ಪುಲ್ವಾಮಾ ದಾಳಿಯಲ್ಲಿ ಗೃಹ ಇಲಾಖೆಯ ಲೋಪಗಳ ಬಗ್ಗೆ ಹೇಳಿದಾಗ ಈ ಬಗ್ಗೆ ಯಾರ ಜೊತೆಗೂ ಮಾತನಾಡಬೇಡಿ ಎಂದು ಪ್ರಧಾನಿಯೇ ನನ್ನ ಬಳಿ ಹೇಳಿದ್ದಾರೆ ಎನ್ನುವ ಗಂಭೀರ ಆರೋಪಗಳನ್ನು ಮಾಡಿದ್ದಾರೆ ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್.
2019ರ ಫೆಬ್ರವರಿಯಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿ ನಡೆದಾಗ ಸತ್ಯಪಾಲ್ ಮಲಿಕ್ ಅಲ್ಲಿನ ರಾಜ್ಯಪಾಲರಾಗಿದ್ದರು.
ದ ವೈರ್ ಸಂದರ್ಶನದಲ್ಲಿ ಮಾತನಾಡಿರುವ ಸತ್ಯಪಾಲ್ ಮಲಿಕ್, ಪ್ರಧಾನಿಗೆ ಕಾಶ್ಮೀರದ ಬಗ್ಗೆ ಸರಿಯಾದ ಅರಿವಿಲ್ಲ. ಪುಲ್ವಾಮಾದಲ್ಲಿ ಸೈನಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಕಾರಣವಾದ ಗೃಹ ಸಚಿವಾಲಯದ ಲೋಪಗಳ ಬಗ್ಗೆ ಮಾತನಾಡದಂತೆ ನನಗೆ ಪ್ರಧಾನಿ ಹೇಳಿದ್ದರು ಎಂದಿದ್ದಾರೆ.
ಪುಲ್ವಾಮಾ ದಾಳಿಯು ದೇಶದ ವ್ಯವಸ್ಥೆ, ಸಿಆರ್‌ಪಿಎಫ್ ಮತ್ತು ಗೃಹ ಸಚಿವಾಲಯದ ಅಸಮರ್ಥತೆ ಪರಿಣಾಮವಾಗಿದೆ ಎಂದ ಅವರು, ಸಿಆರ್‌ಪಿಎಫ್ ಸೈನಿಕರನ್ನು ಸಾಗಿಸಲು ವಿಮಾನವನ್ನು ಕೇಳಿತ್ತು, ಆದರೆ ಕೇಂದ್ರ ಗೃಹ ಸಚಿವಾಲಯ ಅದನ್ನು ನಿರಾಕರಿಸಿತ್ತು ಎನ್ನುವ ಗಂಭೀರ ಆರೋಪಗಳನ್ನು ಮಾಡಿದ್ದು, ಸೈನಿಕರು ಸಾಗುತ್ತಿದ್ದ ರಸ್ತೆಯಲ್ಲಿ ಭದ್ರತಾ ಪರಿಶೀಲನೆಯನ್ನು ಸರಿಯಾಗಿ ಮಾಡಿರಲಿಲ್ಲ ಎಂದರು.
‘‘ಪುಲ್ವಾಮಾ ದಾಳಿ ನಡೆದ ನಂತರ ಪ್ರಧಾನಿ ನನಗೆ ಕರೆ ಮಾಡಿದ್ದರು. ಕೇಂದ್ರ ಗೃಹ ಸಚಿವಾಲಯದ ಲೋಪಗಳ ಬಗ್ಗೆ ಪ್ರಧಾನಿಗೆ ಹೇಳಿದೆ. ಆಗ ಅವರು ಈ ಬಗ್ಗೆ ಯಾರ ಜೊತೆಗೂ ಮಾತನಾಡಬೇಡಿ, ಮೌನವಾಗಿರಿ ಎಂದು ಹೇಳಿದ್ದರು. ಅಜಿತ್ ದೋವಲ್ ಕೂಡ ಇದನ್ನೇ ಹೇಳಿದ್ದರು. ಇದಾದ ಬಳಿಕ ಪಾಕಿಸ್ತಾನದ ಮೇಲೆ ಆರೋಪ ಹೊರಿಸಿ ಚುನಾವಣಾ ಲಾಭವನ್ನು ಪಡೆಯುವುದು ಇದರ ಉದ್ದೇಶ ಎಂದು ನನಗೆ ಮನವರಿಕೆಯಾಯಿತು’’ ಎಂದು ಮಲಿಕ್ ಆರೋಪಿಸಿದ್ದಾರೆ.
ಪುಲ್ವಾಮಾ ಘಟನೆಯಲ್ಲಿ 300 ಕಿಲೋಗ್ರಾಂಗಳಷ್ಟು ಆರ್‌ಡಿಎಕ್ಸ್ ಸ್ಫೋಟಕಗಳನ್ನು ಹೊತ್ತ ಕಾರು ಪಾಕಿಸ್ತಾನದಿಂದ ಬಂದಿದ್ದು, ಜಮ್ಮು ಮತ್ತು ಕಾಶ್ಮೀರದ ರಸ್ತೆಗಳು ಮತ್ತು ಹಳ್ಳಿಗಳಲ್ಲಿ 10-15 ದಿನಗಳ ಕಾಲ ಯಾರಿಗೂ ಗೊತ್ತಾಗದಂತೆ ಸಂಚರಿಸಿದ್ದನ್ನು ಗಮನಿಸುವಾಗ ಗಂಭೀರ ಗುಪ್ತಚರ ವೈಫಲ್ಯ ನಡೆದಿದೆ ಎನ್ನುವುದು ಸತ್ಯ ಎಂದು ಅವರು ಹೇಳಿದ್ದಾರೆ.
ಭ್ರಷ್ಟಾಚಾರದ ವಿಚಾರದಲ್ಲಿ ಪ್ರಧಾನಿ ಮೋದಿ ಬಗ್ಗೆ ಮಾತನಾಡಿರುವ ಅವರು, ‘‘ಪ್ರಧಾನಿಗೆ ಭ್ರಷ್ಟಾಚಾರದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. 2020ರ ಆಗಸ್ಟ್‌ನಲ್ಲಿ ನನ್ನನ್ನು ಗೋವಾದ ಗವರ್ನರ್ ಹುದ್ದೆಯಿಂದ ತೆಗೆದುಹಾಕಲಾಯಿತು ಮತ್ತು ಮೇಘಾಲಯಕ್ಕೆ ಕಳುಹಿಸಲಾಯಿತು. ಇದಕ್ಕೆ ಕಾರಣ ಏನೆಂದರೆ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ನಾನು ಪ್ರಧಾನಿಯ ಗಮನಕ್ಕೆ ತಂದಿದ್ದೆ. ಆದರೆ ಸರಕಾರ ನಿರ್ಲಕ್ಷಿಸಿತು. ಪ್ರಧಾನಿಯ ಸುತ್ತಮುತ್ತಲಿನ ಜನರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಮತ್ತು ಪ್ರಧಾನಿ ಕಚೇರಿಯ ಹೆಸರನ್ನು ಬಳಸುತ್ತಾರೆ.. ಇದೆಲ್ಲವನ್ನೂ ಮೋದಿಯವರ ಗಮನಕ್ಕೆ ತಂದಿದ್ದೇನೆ ಆದರೆ ಪ್ರಧಾನಿ ಗಮನಹರಿಸುತ್ತಿಲ್ಲ ಎಂದು ಮಲಿಕ್ ಹೇಳಿದ್ದಾರೆ.