Tuesday, October 7, 2025
Homeಟಾಪ್ ನ್ಯೂಸ್ಅಮುಲ್ ಸ್ಪರ್ಧೆ ಎದುರಿಸಲು ನಂದಿನಿ ಸಮರ್ಥವಾಗಿವೆ: ಎಸ್.ಟಿ. ಸೋಮಶೇಖರ್

ಅಮುಲ್ ಸ್ಪರ್ಧೆ ಎದುರಿಸಲು ನಂದಿನಿ ಸಮರ್ಥವಾಗಿವೆ: ಎಸ್.ಟಿ. ಸೋಮಶೇಖರ್

ಬೆಂಗಳೂರು: ಅಮುಲ್ ಜೊತೆ ನಂದಿನಿ ಉತ್ಪನ್ನಗಳನ್ನು ತಯಾರಿಸುವ ಕೆಎಂಎಫ್ ವಿಲೀನ ಪ್ರಸ್ತಾಪವೇ ಇಲ್ಲ ಎಂದು ರಾಜ್ಯದ ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಂದಿನಿ ಕೌಂಟರ್‌ಗಳು ಲಕ್ಷಾಂತರ ಇವೆ. ಆನ್‌ಲೈನ್ ವ್ಯವಸ್ಥೆ ಈಗಲೂ ಇದೆ. ಕೆಎಂಎಫ್ ಭದ್ರ ಬುನಾದಿ ಕರ್ನಾಟಕದಲ್ಲಿದೆ. ಈಗ ಕೊರೆ ಕಾಲ. ಹಾಲು ಉತ್ಪಾದನೆ ಬೇಸಿಗೆ ಕಾಲದಲ್ಲಿ ಕಡಿಮೆ ಎಂದು ಪ್ರಶ್ನೆಗಳಿಗೆ ಉತ್ತರಿಸಿದರು.

ಕರ್ನಾಟಕದಲ್ಲಿ 15 ಮಿಲ್ಕ್ ಯೂನಿಯನ್‌ಗಳಿವೆ. ಎಲ್ಲವೂ ಲಾಭದಲ್ಲಿವೆ. ಕೆಎಂಎಫ್‌ನ ನಂದಿನಿ ವಿಶ್ವಾದ್ಯಂತ ವಹಿವಾಟು ಹೊಂದಿದೆ. ನಂದಿನಿ ಸೊಸೈಟಿಗಳು 25- 26 ಲಕ್ಷ ರೈತರಿಂದ ಹಾಲು ಖರೀದಿಸುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರು ನಂದಿನಿ ಉತ್ಪನ್ನವನ್ನೇ ಖರೀದಿ ಮಾಡುತ್ತಾರೆ. ನಂದಿನಿ ಉತ್ಪನ್ನಗಳು ಕರ್ನಾಟಕದಲ್ಲಿ ಭದ್ರವಾಗಿ ಬೆಳೆದಿವೆ. ಯಾರೇ ಸ್ಪರ್ಧೆ ಮಾಡಿದರೂ ಸಮರ್ಥ ಕೆಎಂಎಫ್ ಫೆಡರೇಷನ್, ಇಲ್ಲಿನ ಮಿಲ್ಕ್ ಯೂನಿಯನ್‌ಗಳ ಜೊತೆ ಸ್ಪರ್ಧೆ ಮಾಡಿ ಗೆಲ್ಲಲು ಅಸಾಧ್ಯ ಎಂದು ನುಡಿದರು.
ಅಮೂಲ್ ಹಾಲನ್ನು ಆನ್‌ಲೈನ್ ಮೂಲಕ ಲೀ.ಗೆ 57 ರೂ.ಗೆ ಮಾರಾಟ ಮಾಡಿದರೆ, ನಾವು 39 ರೂ.ಗೆ ಮಾರಾಟ ಮಾಡುತ್ತೇವೆ. ತಮಿಳುನಾಡು ಮತ್ತಿತರ ರಾಜ್ಯಗಳಿಗೆ ನಮ್ಮ ಉತ್ಪನ್ನಗಳನ್ನು ಕಳುಹಿಸುತ್ತಿದ್ದೇವೆ ಎಂದು ವಿವರಿಸಿದರು.

ನಂದಿನಿ ಬ್ರ‍್ಯಾಂಡ್ ಅಳಿಸಲು ಅಸಾಧ್ಯ. ಕೆಎಂಎಫ್ ಬಗ್ಗೆ ತಿಳಿದವರು ಇದರ ಕುರಿತು ತಪ್ಪಾಗಿ ಮಾತನಾಡಲು ಅಸಾಧ್ಯ. ಕರ್ನಾಟಕದಲ್ಲಿ ಭದ್ರ ಬುನಾದಿ ಆ ಸಂಸ್ಥೆಗೆ ಇದೆ. ಅಮುಲ್ ಸ್ಪರ್ಧೆ ಎದುರಿಸಲು ನಂದಿನಿ ಉತ್ಪನ್ನಗಳು ಅತ್ಯಂತ ಸಮರ್ಥವಾಗಿವೆ. ಬಳ್ಳಾರಿ, ಹಾವೇರಿ, ಮಂಡ್ಯದಲ್ಲಿ ಮೆಗಾ ಡೈರಿ ಆಗಿದೆ. ಚುನಾವಣಾ ರಾಜಕಾರಣ ಮಾಡುತ್ತಿದ್ದಾರೆ. ಕೆಎಂಎಫ್ ಅಭದ್ರತೆ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಮಹಿಳೆಯರಿಗೆ ಬೆಲೆ ಇಲ್ಲವೇ?:
ಡಿಕೆ ಶಿವಕುಮಾರ್ ಅವರು ಬಿಜೆಪಿಯವರು ಬಳೆ ತೊಟ್ಟವರು ಎಂದು ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ. ಮೀಸೆ ಇದ್ದವರಿಗೆ ಮಾತ್ರ ಬೆಲೆಯೇ? ಸೀರೆ ಉಟ್ಟ ಮಹಿಳೆಯರಿಗೆ ಬೆಲೆಯೇ ಇಲ್ಲವೇ ಎಂದು ಕೇಳಿದರು. ಅವರು ಬೆಳಿಗ್ಗೆ ಈ ಹೇಳಿಕೆ ಕೊಟ್ಟರೇ ಅಥವಾ ಸಂಜೆ ಈ ಹೇಳಿಕೆ ನೀಡಿದ್ದಾರಾ? ಎಂದು ಅಶ್ವತ್ಥನಾರಾಯಣ ಅವರು ಪ್ರಶ್ನಿಸಿದರು.

ಹೆಚ್ಚಿನ ಸುದ್ದಿ