Saturday, June 27, 2026
Homeಚುನಾವಣೆ 2023ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಇಂದು ಅಧಿಸೂಚನೆ ಹೊರಬೀಳಲಿದೆ. ಅಧಿಸೂಚನೆ ಪ್ರಕಟಗೊಂಡ ನಂತರ ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

ಮೇ 10 ರಂದು ಮತದಾನ ಹಾಗೂ ಮೇ 13 ರಂದು ಮತ ಎಣಿಕೆಯನ್ನು ನಿಗದಿಪಡಿಸಲಾಗಿದೆ. ಹೀಗಾಗಿ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಏಪ್ರಿಲ್ 20 ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರಗಳನ್ನು ಸಲ್ಲಿಸಲು ಸಮಯವನ್ನು ನಿಗದಿಪಡಿಸಲಾಗಿದ್ದು, ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ.

ಏಪ್ರಿಲ್ 14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಮತ್ತು 16 ರಂದು ಭಾನುವಾರ ಸಾರ್ವತ್ರಿಕ ರಜಾ ದಿನವಾಗಿದ್ದು, ಅಂದು ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿ ಸೇರಿದಂತೆ ಒಟ್ಟು 5 ಜನರಿಗೆ ಮಾತ್ರ ಚುನಾವಣಾಧಿಕಾರಿಗಳ ಕಚೇರಿ ಪ್ರವೇಶಿಸಲು ಅವಕಾಶವಿದ್ದು, 100 ಮೀ ವ್ಯಾಪ್ತಿಯಲ್ಲಿ 3 ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶವಿರುತ್ತದೆ. ಏಪ್ರಿಲ್ 21ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಏಪ್ರಿಲ್ 24ರಂದು ಮಧ್ಯಾಹ್ನ 3 ಗಂಟೆಯೊಳಗಾಗಿ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. 

ಹೆಚ್ಚಿನ ಸುದ್ದಿ