ಹೊಸದಿಲ್ಲಿ: ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶಕ್ಕೆ ಭೇಟಿ ನೀಡಿದ ಮೂವರು ಅಧಿಕಾರಿಗಳ ಮೇಲೆ ಕಲ್ಲೆಸೆದು ದಾಳಿ ನಡೆಸಿದ್ದು, ಮೂವರು ಅಧಿಕಾರಿಗಳು ಗಾಯಗೊಂಡಿದ್ದಾರೆ.
ಬಿಹಾರದ ಪಾಟ್ನಾದ ಮನೇರ್ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ಇಬ್ಬರು ಮಹಿಳಾ ಅಧಿಕಾರಿಗಳೂ ಗಾಯಗೊಂಡಿದ್ದಾರೆ.
ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದರಿಂದ ಪಾಟ್ನಾದಿಂದ 30 ಕಿಲೋ ಮೀಟರ್ ದೂರದಲ್ಲಿರುವ ಮನೇರ್‌ನಲ್ಲಿರುವ ಕೊಯಿಲ್ವಾರ್ ಸೇತುವೆ ಬಳಿ ಅಧಿಕಾರಿಗಳು ಹೋಗಿದ್ದರು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿ ಹಲವಾರು ವೀಡಿಯೋಗಳು ವೈರಲ್ ಆಗಿದ್ದು, ದುಷ್ಕರ್ಮಿಗಳ ಗುಂಪು ಅಧಿಕಾರಿಗಳನ್ನು ನಿಂದಿಸುತ್ತಿರುವ, ಕಲ್ಲು ತೂರಾಟ ನಡೆಸುತ್ತಿರುವ ಮತ್ತು ವ್ಯಕ್ತಿಯೊಬ್ಬ ಮಹಿಳಾ ಅಧಿಕಾರಿಯ ಕೂದಲು ಎಳೆದು ಹಲ್ಲೆ ನಡೆಸುತ್ತಿರುವ ದೃಶ್ಯಗಳಿವೆ.