ಬೆಂಗಳೂರು: ಮೇ 10 ರಂದು ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಿಸಿದ್ದು, ಅನಿವಾಸಿ ಕನ್ನಡಿಗರು ತಾವಿರುವ ಸ್ಥಳದಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಿ ಕೊಡುವಂತೆ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಕರ್ನಾಟಕದ ಅನೇಕ ಕನ್ನಡಿಗರು ಕೆಲಸದ ಸಲುವಾಗಿ ದೇಶ- ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ. ಮೇ 10 ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಅನಿವಾಸಿ ಕನ್ನಡಿಗರಿಗೆ ಬರಲು ಅಸಾಧ್ಯ. ಆದ್ದರಿಂದ ಅಂಚೆ ಮತದಾನ ಅಥವಾ ಭಾರತೀಯ ರಾಯಭಾರಿ ಕಚೇರಿಯಲ್ಲಿ ಮತಗಟ್ಟೆ ತೆರೆಯುವ ಮೂಲಕ ಮತದಾನ ಮಾಡಲು ಅವಕಾಶ ಮಾಡಿಕೊಡಬೇಕೆಂದು ಸಾಗರೋತ್ತರ ಕನ್ನಡಿಗರು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಸುಮಾರು 60 ಲಕ್ಷ ಭಾರತೀಯರು ವಿದೇಶದಲ್ಲಿ ವಾಸಿಸುತ್ತಿದ್ದು, ಇವರ ಮತದಾನದಿಂದ ಪ್ರಜಾಪ್ರಭುತ್ವದಲ್ಲಿ ಮಹತ್ವದ ಬದಲಾವಣೆ ತರಬಹುದು. ಅಲ್ಲದೇ, 5 ಲಕ್ಷ ಅನಿವಾಸಿ ಕನ್ನಡಿಗರು ಮತದಾನ ಮಾಡಲು ಅರ್ಹರಾಗಿದ್ದಾರೆ. ಈ ಕುರಿತು ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಮತದಾನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.