ಬೆಂಗಳೂರು: ಕಾಂಗ್ರೆಸ್ ಎರಡನೇ ಪಟ್ಟಿ ಗುರುವಾರ ಬಿಡುಗಡೆಯಾಗಿದ್ದು, ನಿರೀಕ್ಷೆಯಂತೆ ಟಿಕೆಟ್ ವಂಚಿತರ ಅಸಮಧಾನ ಹೊಗೆಯಾಗತೊಡಗಿದೆ. ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಈಡಿಗ ಸಮುದಾಯ ಎಚ್.ಆರ್. ಶ್ರೀನಾಥ್ ಅವರಿಗೆ ಟಿಕೆಟ್ ನೀಡಿಲ್ಲವೆಂದು ಪ್ರಣವಾನಂದ ಸ್ವಾಮೀಜಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
ಡಾ. ಪ್ರಣವಾನಂದ ಸ್ವಾಮೀಜಿ ಈ ಕುರಿತು ಪ್ರತಿಕ್ರಿಯಿಸಿ ಎಚ್.ಆರ್.ಶ್ರೀನಾಥ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಅನ್ಯಾಯವಾಗಿದೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಟಿಕೆಟ್ ನೀಡುವುದಾಗಿ ಭರವಸೆಯನ್ನು ನೀಡಿದ್ದು, ಈಗ ಮತ್ತೊಬ್ಬರಿಗೆ ನೀಡಿದ್ದಾರೆ. ಕಳೆದ 42 ವರ್ಷಗಳಿಂದ ಓಬಿಸಿ ಮುಖಂಡರ ಪ್ರಾಬಲ್ಯದಲ್ಲಿರುವ ಕ್ಷೇತ್ರವನ್ನು ಬೇರೆಯವರಿಗೆ ನೀಡಲಾಗಿದೆ ಎಂದಿದ್ದಾರೆ. ವೇಣುಗೋಪಾಲ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಎಲ್ಲರ ಬಳಿಯೂ ಎಚ್.ಆರ್.ಶ್ರೀನಾಥ್ ಅವರಿಗೆ ಟಿಕೆಟ್ ನೀಡುವಂತೆ ಮನವಿ ಸಲ್ಲಿಸಲಾಗಿತ್ತು. ಎಲ್ಲರೂ ಒಪ್ಪಿಕೊಂಡರೂ ಸಹ ಸಿದ್ದರಾಮಯ್ಯನವರ ಹಠದಿಂದಾಗಿ ಈಡಿಗ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ.
ಜೊತೆಗೆ ಕಲ್ಯಾಣ ಕರ್ನಾಟಕವಷ್ಟೇ ಅಲ್ಲದೇ ರಾಜ್ಯದ ಹಲವು ಭಾಗಗಳಲ್ಲಿ ಈಡಿಗ ಸಮುದಾಯದ ಪ್ರಾಬಲ್ಯವಿದೆ. ಆ ಮತಗಳನ್ನು ಯಾವಕಡೆ ತಿರುಗಿಸಬೇಕು, ಯಾವ ನಿರ್ಣಯ ತೆಗೆದುಕೊಳ್ಳಬೇಕೆಂದು ಎರಡು ದಿನಗಳಲ್ಲಿ ತೀರ್ಮಾನಿಸಲಿದ್ದೇವೆ ಎಂದು ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆಯನ್ನೂ ಸಹ ರವಾನಿಸಿದ್ದಾರೆ.
