ಮೈಸೂರು: ಕನಿಷ್ಠ ತಾಲೂಕು ಕೇಂದ್ರವೂ ಸಹ ಇಲ್ಲದೆ ವರುಣಾ ಕ್ಷೇತ್ರದ ಜನ ಅಬ್ಬೇಪಾರಿಗಳಾಗಿದ್ದಾರೆ. ತಮ್ಮ ಕೆಲಸ ಮಾಡಿಸಿಕೊಳ್ಳಬೇಕೆಂದರೆ ಎಲ್ಲಿ ಹೋಗಬೇಕೆಂಬ ಗೊಂದಲದಿಂದ ಒದ್ದಾಡುತ್ತಿದ್ದಾರೆ, ಬಿಜೆಪಿ ಅಭ್ಯರ್ಥಿ ಸೋಮಣ್ಣನವರನ್ನು ಗೆಲ್ಲಿಸಿ ವರುಣಾ ತಾಲೂಕು ಕೇಂದ್ರವನ್ನಾಗಿ ಮಾಡುತ್ತೇವೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಗುರುವಾರ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಇಷ್ಟು ವರ್ಷಗಳಿಂದ ಅಲ್ಲಿ ಒಂದು ತಾಲೂಕು ಕೇಂದ್ರವನ್ನೂ ಸಹ ಮಾಡಲು ಸಿದ್ದರಾಮಯ್ಯನವರ ಕೈಲಿ ಸಾಧ್ಯವಾಗಲಿಲ್ಲ ಎಂದು ಟೀಕಿಸಿದ್ದು, ಮುಖ್ಯಮಂತ್ರಿಯಾದರೂ ಸಿದ್ದರಾಮಯ್ಯನವರಿಂದ ವರುಣಾ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಲಿಲ್ಲ. ಒಂದೇ ಸರ್ಕಾರಿ ಕಚೇರಿಯಲ್ಲಿ ಎಲ್ಲ ಕೆಲಸಗಳೂ ನಡೆಯುವಂತಿರಬೇಕು. ಅಂಥದ್ದೊಂದು ತಾಲೂಕು ಕೇಂದ್ರವನ್ನು ನಿರ್ಮಿಸುವುದು ಬಿಜೆಪಿ ಉದ್ದೇಶ ಎಂದು ಹೇಳಿದ್ದಾರೆ.
ಐದು ವರ್ಷಗಳ ಹಿಂದೆ ಸಿದ್ದರಾಮಯ್ಯ ಇದೇ ನನ್ನ ಕಡೆಯ ಚುನಾವಣೆ ಎಂದು ಹೇಳಿದ್ದರು, ಈ ಬಾರಿಯೂ ಅದೇ ಪ್ಲೇಟನ್ನು ಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಪ್ರತಾಪ್ ಸಿಂಹ, ಚಾಮುಂಡೇಶ್ವರಿ ಜನತೆ ಅವರನ್ನು ಮುಗಿಸಿದಂತೆ ಈ ಬಾರಿಯೂ ವರುಣಾ ಜನತೆ ಸಿದ್ದರಾಮಯ್ಯನವರ ರಾಜಕೀಯ ಜೀವನಕ್ಕೆ ಅಂತ್ಯ ಹಾಡಲಿದ್ದಾರೆಂದು ಪ್ರತಾಪ್ ಸಿಂಹ ನುಡಿದರು.
