ಹಾಸನ: ಹಾಸನದ ಬಿಜೆಪಿ ಅಭ್ಯರ್ಥಿಯಾಗಿರುವ ಶಾಸಕ ಪ್ರೀತಂ ಗೌಡ ಹೆಚ್ ಡಿ ರೇವಣ್ಣ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿ ಅಚ್ಚರಿ ಮೂಡಿಸಿದ್ದಾರೆ. ಜಿಲ್ಲೆಯ ರಾಜಕಾರಣದಲ್ಲಿ ಎಚ್.ಡಿ. ರೇವಣ್ಣ ಅವರಿಗಿರುವ ಶಕ್ತಿಯನ್ನು ನಾನು ಅಲ್ಲಗಳೆಯಲಾರೆ ಎಂದು ಹೇಳಿರುವ ಪ್ರೀತಂ, “ಜಿಲ್ಲೆಯಲ್ಲಿ ಜೆಡಿಎಸ್ ಎಂದರೆ ರೇವಣ್ಣ, ರೇವಣ್ಣ ಎಂದರೆ ಜೆಡಿಎಸ್ ಎಂಬ ಪರಿಸ್ಥಿತಿ ಇದೆ” ಎಂದು ಹೇಳಿದ್ದಾರೆ.
ರೇವಣ್ಣರಿಗೆ 50 ವರ್ಷಗಳಿಂದ ಹಾಸನ ಜಿಲ್ಲೆಯ ರಾಜಕಾರಣ ತಿಳಿದಿದೆ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತರೂ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ಅವರನ್ನು ಗೆಲ್ಲಿಸಿಕೊಂಡರು. ರಾಜ್ಯದಲ್ಲಿ ಜೆಡಿಎಸ್ ಗೆದ್ದ ಒಂದು ಸ್ಥಾನ ಹಾಸನ ಕ್ಷೇತ್ರ ಮಾತ್ರ ಎಂದು ರೇವಣ್ಣ ಅವರ ರಾಜಕಾರಣದ ಬಗಗೆ ಶ್ಲಾಘನೆಯ ಮಾತಾಡಿದ್ದಾರೆ.
ಎಂಎಲ್ಸಿ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಸೋತರೂ ಹಾಸನ ಜಿಲ್ಲೆಯಲ್ಲಿ ಸೂರಜ್ ರೇವಣ್ಣರನ್ನು ಗೆಲ್ಲಿಸಿಕೊಂಡ ಚಾಣಾಕ್ಷ ರೇವಣ್ಣ. ರೇವಣ್ಣ ಅವರಿಗಿರುವ ರಾಜಕೀಯ ಶಕ್ತಿಯನ್ನು ಟೀಕೆ ಮಾಡುವವರಿಗೆ ಹಾಸನ ಜಿಲ್ಲೆಯ ರಾಜಕೀಯ ಗೊತ್ತಿಲ್ಲ ಎಂದೇ ಅರ್ಥ ಎಂದು ಪ್ರೀತಂ ಗೌಡ ಹೇಳಿದ್ದಾರೆ.
ಹಾಸನ ಜಿಲ್ಲೆಯಲ್ಲಿ ರೇವಣ್ಣ ಅವರ ಆಶೀರ್ವಾದ ಇಲ್ಲದ ಜೆಡಿಎಸ್ ಅಭ್ಯರ್ಥಿ ಠೇವಣಿಯನ್ನೂ ಪಡೆಯಲಾರ ಎಂದು ಪ್ರೀತಂ ಹೇಳಿದ್ದಾರೆ.
