ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಶಿಗ್ಗಾಂವಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ ಅವರು 5.98 ಕೋಟಿ ರೂ. ಚರಾಸ್ತಿ, 22.95 ಕೋಟಿ ರೂ. ಸ್ಥಿರಾಸ್ತಿ ಘೋಷಿಸಿಕೊಂಡಿದ್ದಾರೆ.
ಸಿಎಂ, 1.14 ಕೋಟಿ ರೂ. ಚರಾಸ್ತಿ ಇರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ತಮ್ಮ ಅವಿಭಜಿತ ಕುಟುಂಬದಲ್ಲಿ 1.57 ಕೋಟಿ ರೂ. ಚರಾಸ್ತಿ, 19.20 ಕೋಟಿ ರೂ. ಸ್ಥಿರಾಸ್ತಿ ಇದೆ. ಪುತ್ರಿ ಹೆಸರಲ್ಲಿ 1.28 ಕೋಟಿ ರೂ. ಚರಾಸ್ತಿ , ತಮ್ಮಲ್ಲಿ 3 ಲಕ್ಷ ರೂ. ನಗದು, ಪತ್ನಿ ಹೆಸರಲ್ಲಿ 50,000 ಹಾಗೂ ಪುತ್ರಿ ಅದಿತಿ ಬೊಮ್ಮಾಯಿಯಲ್ಲಿ 25,000 ನಗದು ಇರುವುದಾಗಿ ಹೇಳಿದ್ದಾರೆ. ಜೊತೆಗೆ ವಿವಿಧ ಬ್ಯಾಂಕ್‌ಗಳಲ್ಲಿ 40 ಲಕ್ಷ ರೂ.ಗೂ ಹೆಚ್ಚು ಠೇವಣಿ, ಪತ್ನಿ ಬಳಿ 27.6 ಲಕ್ಷ ರೂ. ಠೇವಣಿ ಇದೆ. ವಿವಿಧ ಕಂಪನಿಗಳಲ್ಲಿ 3.23 ಕೋಟಿ ರೂ. ಹೂಡಿಕೆ, ಪತ್ನಿ ಸುಮಾರು 7 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಪುತ್ರಿ ಹೆಸರಲ್ಲೂ 23 ಲಕ್ಷ ರೂ.ಗೂ ಮಿಕ್ಕಿ ಹೂಡಿಕೆ ಇದೆ ಎಂದು ದಾಖಲೆ ನೀಡಿದ್ದಾರೆ.
ಪುತ್ರ ಭರತ್ ಬೊಮ್ಮಾಯಿ ಹಾಗೂ ಸುಗುಣ ಎನ್ನುವವರಿಗೆ ಕ್ರಮವಾಗಿ 14.74 ಲಕ್ಷ ರೂ. ಹಾಗೂ 2 ಲಕ್ಷ ರೂ. ಸಾಲ ನೀಡಿದ್ದಾರೆ. ತಮ್ಮ ಅವಿಭಕ್ತ ಕುಟುಂಬದಿಂದ 1.42 ಕೋಟಿ ರೂ. ಸಾಲವಾಗಿ ಪಡೆದಿದ್ದಾರೆ.
ಬೊಮ್ಮಾಯಿ ಅವರ ಬಳಿ 1.50 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳಿದ್ದರೆ, ಪತ್ನಿ ಬಳಿ 78.83 ಲಕ್ಷ ರೂ, ಪುತ್ರಿ ಬಳಿ 53.84 ಲಕ್ಷ ರೂ., ಕುಟುಂಬದ ಬಳಿ 13.78 ಲಕ್ಷ ರು. ಮೌಲ್ಯದ ಚಿನ್ನಾಭರಣಗಳಿವೆ.
ಸಿಎಂ ಬಳಿ 1 ಕೃಷಿ ಜಮೀನಿದ್ದು, ಕುಟುಂಬದ್ದೂ ಒಂದು ಜಮೀನಿದೆ. ಯಲಹಂಕ ಹಾಗೂ ಹುಬ್ಬಳ್ಳಿಯಲ್ಲಿ ತಲಾ ಒಂದು ಕೃಷಿಯೇತರ ಭೂಮಿಯಿದೆ. ಕುಟುಂಬದ ಹೆಸರಲ್ಲಿ ಹುಬ್ಬಳ್ಳಿಯ ನಾಲ್ಕು ಕೃಷಿಯೇತರ ಭೂಮಿ ಇದೆ.
ಇನ್ನು ಧಾರವಡದ ಇಂಡಸ್ಟ್ರಿಯಲ್ ಏರಿಯಾ, ದೊಡ್ಡಬಳ್ಳಾಪುರ ಹಾಗೂ ಕಾರಾವರದಲ್ಲಿ ವಾಣಿಜ್ಯ ಕಟ್ಟಡಗಳಿವೆ. ಶಿಗ್ಗಾಂವಿ, ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿ ಫ್ಲ್ಯಾಟ್ ಇದೆ. ಕುಟುಂಬದ ಹೆಸರಲ್ಲಿ ಹುಬ್ಬಳ್ಳಿ ಹಾಗೂ ಬೆಂಗಳೂರಿನ ಆರ್‌ಟಿ ನಗರದಲ್ಲಿ ಮನೆಗಳಿವೆ.
*ಸಿಎಂಗೂ ಹತ್ತಾರು ಕೈ ಸಾಲ*
ಐಸಿಐಸಿಐ ಬ್ಯಾಂಕ್‌ನಲ್ಲಿ 47.35 ಲಕ್ಷ ರೂ., ಎಸ್‌ಬಿಐನಲ್ಲಿ 37.47 ಲಕ್ಷ ರೂ. 79 ಸಾವಿರ ಗೃಹ ಸಾಲವೂ ಎಸ್‌ಬಿಐನಲ್ಲಿದೆ. ಇದಲ್ಲದೆ ಕುಟುಂಬದಿಂದ 1.42 ಕೋಟಿ ರೂ. ಸಾಲವನ್ನು ಬೊಮ್ಮಾಯಿ ಪಡೆದುಕೊಂಡಿದ್ದು, ಒಟ್ಟು 5.79 ಕೋಟಿ ರೂ. ಸಾಲ ಹೊಂದಿದ್ದಾರೆ.
ಇನ್ನು 2021-22ರಲ್ಲಿ 41.09 ಲಕ್ಷ ರೂ. ಆದಾಯ ಗಳಿಸಿರುವುದಾಗಿ ಸಿಎಂ ಹೇಳಿದ್ದು, ಪತ್ನಿ ಆದಾಯ 2.69 ಲಕ್ಷ ರೂ. ಎಂದು ಘೋಷಿಸಿಕೊಂಡಿದ್ದಾರೆ. ವಿಶೇಷವೆಂದರೆ ತಾವಾಗಲಿ, ತಮ್ಮ ಕುಟುಂಬದವರ ಬಳಿಯಾಗಲಿ ಯಾವುದೇ ವಾಹನಗಳಿಲ್ಲ ಎಂದು ಬೊಮ್ಮಾಯಿ ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದಾರೆ.
