ಕನಕಪುರ: ನಿಮಗೆ ಮೋದಿ ಮತ್ತು ಅಶೋಕ್ ಅವರ ಸರ್ಕಾರ ಬೇಕೋ ಅಥವಾ ರಾಹುಲ್ ಗಾಂಧಿ ಮತ್ತು ಡಿ.ಕೆ.ಶಿವಕುಮಾರ್ ಸರ್ಕಾರ ಬೇಕೋ ಎಂದು ಜನರು ನಿರ್ಧರಿಸುವ ಕಾಲ ಬಂದಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಮಂಗಳವಾರ ಕನಕಪುರದಲ್ಲಿ ಭರ್ಜರಿ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಇಲ್ಲಿ ಬೇರೆಯವರಿಗೆ ಕೈಯೆತ್ತಿ ನಮಸ್ಕರಿಸಲೂ ಸಹ ಭಯಪಡುವಷ್ಟು ವಾತಾವರಣವಿತ್ತು. ಈ ಕನಕಪುರವನ್ನು ಬದಲಿಸಲು ಮೋದಿ ಮತ್ತು ಅಮಿತ್ ಶಾ ನಂಬಿಕೆಯಿಟ್ಟು ನನ್ನನ್ನು ಇಲ್ಲಿಗೆ ಅಭ್ಯರ್ಥಿಯಾಗಿ ನಿಯೋಜಿಸಿದ್ದಾರೆ ಎಂದರು.
ನಾನು ಸಾಕಷ್ಟು ಬಾರಿ ಮಂತ್ರಿಯಾಗಿದ್ದೇನೆ. ಸಾರಿಗೆ ಮಂತ್ರಿ , ಆರೋಗ್ಯ ಮಂತ್ರಿ, ಗೃಹಮಂತ್ರಿಯಾಗಿ ಇಲ್ಲಿ ಬಂದಿದ್ದೇನೆ. ಆದರೆ ಇಂದು ಸಿಕ್ಕಷ್ಟು ಅಭೂತಪೂರ್ವ ಸ್ವಾಗತ ಎಂದೂ ಸಹ ಸಿಕ್ಕಿರಲಿಲ್ಲ ಎಂದು ನುಡಿದ ಅಶೋಕ್, ಕನಕಪುರದಲ್ಲಿಯೂ ಸಹ ದೀನದಲಿತರಿದ್ದಾರೆ. ಲಂಬಾಣಿ ತಾಂಡಾಗಳಿವೆ, ಪರಿಶಿಷ್ಟರಿದ್ದಾರೆ ಅವರೆಲರ ಪರವಾಗಿ ನಾನು ಶ್ರಮಿಸುತ್ತೇನೆ ಎಂದು ಹೇಳಿದರು.
ಸಚಿವ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್ ಈ ವೇಳೆ ಅಶೋಕ್ ರಿಗೆ ಸಾಥ್ ನೀಡಿದರು.