ಕೊನೆಗೂ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. 52 ಹೊಸ ಮುಖಗಳಿಗೆ ಮಣೆ ಹಾಕಿರುವ ಬಿಜೆಪಿ ರೌಡಿ ಶೀಟರ್‌ಗೂ ಟಿಕೆಟ್ ನೀಡಿದೆ. ಪ್ರಿಯಾಂಕ್ ಖರ್ಗೆ ಅವರ ಎದುರು ಚಿತ್ತಾಪುರ ಕ್ಷೇತ್ರದಿಂದ ಬಿಜೆಪಿಯು ರೌಡಿ ಶೀಟರ್ ಪಟ್ಟಿಯಲ್ಲಿರುವ ಮಣಿಕಂಠ ರಾಠೋಡರನ್ನು ಕಣಕ್ಕಿಳಿಸಿದೆ. ಮಣಿಕಂಠ ಇತ್ತೀಚೆಗೆ ಯಾದಗಿರಿ ಜಿಲ್ಲಾ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯಾಗಿರುವುದು ಗಮನಾರ್ಹ.
ಈ ಹಿಂದೆ ಪ್ರಿಯಾಂಕ್ ಖರ್ಗೆಗೆ ಕೊಲೆ ಬೆದರಿಕೆ ಹಾಕಿದ ಆರೋಪದಲ್ಲಿ ಮಣಿಕಂಠರನ್ನು ಬಂಧಿಸಲಾಗಿತ್ತು.
ಮಣಿಕಂಠ ರೌಡಿಶೀಟರ್ ಪಟ್ಟಿಯಲ್ಲಿದ್ದುದರಿಂದ ಅವರನ್ನು ಕಲಬುರಗಿ ಪೊಲೀಸ್ ಕಮಿಷನರ್ ಡಾ.ವೈ.ಎಸ್. ರವಿಕುಮಾರ್ ಗಡಿಪಾರು ಮಾಡಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೊರೆ ಹೋಗಿದ್ದ ಮಣಿಕಂಠ ತಡೆಯಾಜ್ಞೆ ತಂದಿದ್ದರು.
ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಕಂಠ ವಿರುದ್ಧ ಹಲವು ಪ್ರಕರಣಗಳು ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳ ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಚಿತ್ತಾಪುರ ಕ್ಷೇತ್ರದಲ್ಲಿ ಎಮ್‌ಎಲ್‌ಸಿ ಸುನೀಲ್ ವಲ್ಯಾಪುರೆ, ಅರವಿಂದ ಚವ್ಹಾಣ, ಮಾಜಿ ಶಾಸಕ ದಿ. ವಾಲ್ಮೀಕಿ ನಾಯಕ್ ಪುತ್ರ ವಿಠ್ಠಲ ನಾಯಕ್ ಮೊದಲಾದ ಪ್ರಬಲ ಆಕಾಂಕ್ಷಿಗಳಿದ್ದರು ರೌಡಿ ಶೀಟರ್ ಗೆ ಬಿಜೆಪಿ ಟಿಕೆಟ್ ನೀಡಿರುವುದು ಸ್ಥಳೀಯ ಮುಖಂಡರ ಅಚ್ಚರಿಗೆ ಕಾರಣವಾಗಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರೊಂದಿಗೆ ನಿಕಟ ಒಡನಾಟ ಇರುವ ಮಣಿಕಂಠಗೆ ಅದೇ ಕಾರಣಕ್ಕೆ ಟಿಕೆಟ್ ನೀಡಲಾಗಿದೆ ಎನ್ನಲಾಗಿದೆ.
