Monday, July 7, 2025
Homeಚುನಾವಣೆ 2023ಡಬಲ್ ಎಂಜಿನ್ ಸರ್ಕಾರದಿಂದ ಡಬಲ್ ದ್ರೋಹ- ರಣ್‌ದೀಪ್ ಸುರ್ಜೇವಾಲಾ ಆರೋಪ

ಡಬಲ್ ಎಂಜಿನ್ ಸರ್ಕಾರದಿಂದ ಡಬಲ್ ದ್ರೋಹ- ರಣ್‌ದೀಪ್ ಸುರ್ಜೇವಾಲಾ ಆರೋಪ

ಬೆಂಗಳೂರು: ಮೀಸಲಾತಿ ಪರಿಷ್ಕರಣೆ ಮತ್ತು ಒಳಮೀಸಲಾತಿ ತಿದ್ದುಪಡಿಯ ಮೂಲಕ ಬಸವರಾಜ ಬೊಮ್ಮಾಯಿ ಮತ್ತು ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ರಾಜ್ಯ, ಕೇಂದ್ರ ಬಿಜೆಪಿ ಸರ್ಕಾರ ಕನ್ನಡಿಗರಿಗೆ ಡಬಲ್ ದ್ರೋಹ ಮಾಡಿದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣ್‌ದೀಪ್ ಸಿಂಗ್ ಸುರ್ಜೇವಾಲಾ ವಾಗ್ದಾಳಿ ನಡೆಸಿದ್ದಾರೆ. ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇವಲ ಓಟ್ ಬ್ಯಾಂಕ್ ರಾಜಕಾರಣದ ಏಕೈಕ ಉದ್ದೇಶದಿಂದ ಅಸಾಂವಿಧಾನಿಕವಾದ ಮತ್ತು ಕಾನೂನು ಮಾನ್ಯತೆಯಿಲ್ಲದ ಮೀಸಲಾತಿ ನೀತಿಯನ್ನು ಬಿಜೆಪಿ ಜಾರಿಗೊಳಿಸಹೊರಟಿದೆ ಎಂದು ಆರೋಪಿಸಿದರು.
ಅಂಬೇಡ್ಕರ್ ಅವರ ೧೩೦ ನೇ ಜನ್ಮದಿನದ ಸಂದರ್ಭದಲ್ಲಿ ಸಂವಿಧಾನದ ಪರಿಕಲ್ಪನೆಯನ್ನೇ ನಾಶ ಮಾಡಲು ಬಿಜೆಪಿ ಹೊರಟಿದೆ ಎಂದು ಗುಡುಗಿದ ರಣ್‌ದೀಪ್ ಸಿಂಗ್ ಸುರ್ಜೇವಾಲಾ, ಎಪ್ಪತ್ತೈದು ವರ್ಷಗಳ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ೯೦ ದಿನಗಳ ಅವಧಿಯಲ್ಲಿ ಮೂರು ಬಾರಿ ಮೀಸಲಾತಿಯನ್ನು ಬದಲಾಯಿಸಲಾಗಿದೆ ಎಂದರು.
ಬೆಳಗಾವಿಯಲ್ಲಿ ನಡೆದ ಕಡೆಯ ಅಧಿವೇಶನದಲ್ಲಿ ಅವಸರದಲ್ಲಿ ಜಾರಿಗೊಳಿಸಿದ ಈ ನೀತಿ ಯಾವುದೇ ರೀತಿಯಲ್ಲೂ ಮಾನ್ಯತೆ ಪಡೆದಿಲ್ಲ ಎಂದು ವಾದಿಸಿದ ಸುರ್ಜೇವಾಲಾ, ಇದೇ ಮೊದಲ ಬಾರಿಗೆ ಹಿಂದುಳಿದ ವರ್ಗಗಳ ಆಯೋಗದೊಡನೆ ಸಮಾಲೋಚನೆ ನಡೆಸದೆ ಈ ಅರೆಬೆಂದ ಕಾನೂನಿನ ಮೂಲಕ ಜನರನ್ನು ಮೋಸಗೊಳಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.
ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಬಸವರಾಜ ಬೊಮ್ಮಾಯಿ ಅಣಕಿಸುತ್ತಿದ್ದರೆ, ಪ್ರಧಾನಿ ಮೋದಿ ನಾಶಪಡಿಸಲು ಹೊರಟಿದ್ದಾರೆ. ಈ ಕೂಡಲೇ ಬೊಮ್ಮಾಯಿ ಅವರು ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಸುರ್ಜೇವಾಲಾ ಒತ್ತಾಯಿಸಿದ್ದಾರೆ.

ಹೆಚ್ಚಿನ ಸುದ್ದಿ