ಚೆನ್ನೈ: ಆರು ವರ್ಷದ ಯುಕೆಜಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಕಡಲೂರು ಜಿಲ್ಲೆಯ ವೃದ್ಧಾಚಲಂನಲ್ಲಿರುವ ಖಾಸಗಿ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ವಿ. ಪಕ್ಕಿರಿಸಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಪಕ್ಷಕ್ಕೆ ಅಪಖ್ಯಾತಿಯ ಜತೆಗೆ ಪಕ್ಷದ ತತ್ವಗಳಿಗೆ ವಿರುದ್ಧವಾಗಿ ವರ್ತಿಸಿದ ಆರೋಪದ ಮೇಲೆ ವೃದ್ಧಾಚಲಂ ಪುರಸಭೆಯ ವಾರ್ಡ್ ನಂ 30ರ ಕೌನ್ಸಿಲರ್ ಕೂಡ ಆಗಿರುವ ಪಕ್ಕಿರಿಸಾಮಿಯನ್ನು ಆಡಳಿತಾರೂಢ ಡಿಎಂಕೆ ಉಚ್ಚಾಟಿಸಿದೆ ಎಂದು ತಿಳಿಸಿದ್ದಾರೆ.
ವೃದ್ಧಾಚಲಂನ ಶಕ್ತಿನಗರದ ಪ್ರಾಥಮಿಕ ಶಾಲೆಯ ಆರು ವರ್ಷದ ವಿದ್ಯಾರ್ಥಿನಿ ಏಪ್ರಿಲ್ 11ರಂದು ಶಾಲೆಯಿಂದ ಹಿಂತಿರುಗಿದ ನಂತರ ಆಕೆ ಹೊಟ್ಟೆ ನೋವು ಎಂದು ಪೋಷಕರಿಗೆ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಪೋಷಕರು ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಬಾಲಕಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎಂದು ತಿಳಿಸಿದ್ದು, ನಂತರ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ವೃದ್ಧಾಚಲಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಾಲಕಿಯ ತಾಯಿ ವೃದ್ಧಾಚಲಂನ ಮಹಿಳಾ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ, ನಿವೃತ್ತ ಶಿಕ್ಷಕ ಪಕ್ಕಿರಿಸಾಮಿಯನ್ನು ಬಂಧಿಸಲಾಗಿದೆ. ಈ ಪ್ರಕರಣದ ಮುಂದಿನ ತನಿಖೆಗೆ ಆದೇಶ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಪಕ್ಷಾತೀತವಾಗಿ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಿದ್ದೇನೆ. ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯೂ ವಿಚಾರಿಸಿದರು. ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಎಸಗುವವರನ್ನು ಈ ಸರ್ಕಾರ ಇಡೀ ಮಾನವಕುಲಕ್ಕೆ ನಾಚಿಕೆಗೇಡಿ ಎಂದು ಪರಿಗಣಿಸುತ್ತದೆ. ಅಂತಹ ವ್ಯಕ್ತಿಗಳ ವಿರುದ್ಧ ಯಾವುದೇ ಪಕ್ಷಪಾತವಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡುತ್ತೇನೆ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.