ಹುಬ್ಬಳ್ಳಿ: ಕುಟುಂಬ ಸದಸ್ಯರಿಗೆ ಟಿಕೆಟ್ ಬೇಕಾಗಿಲ್ಲ. ಸ್ಪರ್ಧೆ ಮಾಡುವುದಿದ್ದರೆ ನಾನೇ ಮಾಡುತ್ತೇನೆ. ಒಬ್ಬ ಶಾಸಕನಾಗಿ ಕೆಲಸ ಮಾಡುತ್ತೇನೆ. ಬಿಜೆಪಿ ಟಿಕೆಟ್ ಕೊಡಲಿ ಬಿಡಲಿ ಶಾಸಕನಾಗಿ ಸ್ಪರ್ಧಿಸುವುದಂತೂ ಖಚಿತ ಎಂದು ಜಗದೀಶ್ ಶೆಟ್ಟರ್ ಶನಿವಾರ ಸಂಜೆ ತಮ್ಮ ಧೃಡ ನಿರ್ಧಾರವನ್ನು ಹೊರಹಾಕಿದ್ದಾರೆ. ಇಂದು ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಎಲ್ಲರೊಡನೆ ಚರ್ಚಿಸಿದ ಬಳಿಕ ಜಗದೀಶ್ ಶೆಟ್ಟರ್ ಮಾಧ್ಯಮಗಳೊಂದಿಗೆ ತಮ್ಮ ನಿರ್ಣಯ ಹಂಚಿಕೊಂಡರು.
ಜಗದೀಶ್ ಶೆಟ್ಟರ್ ಅವರ ಮನವೊಲಿಸಲು ಬೆಳಗಿನಿಂದಲೇ ಪ್ರಲ್ಹಾದ್ ಜೋಷಿ ಮತ್ತಿತರರು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಪ್ರಧಾನ್ ಮತ್ತು ಬಸವರಾಜ್ ಬೊಮ್ಮಾಯಿಯವರೊಡನೆ ಮತ್ತೆ ಪ್ರಲ್ಹಾದ್ ಜೋಷಿ ಜಗದೀಶ್ ಶೆಟ್ಟರ್ ನಿವಾಸಕ್ಕೆ ತೆರಳಿ ಮನವೊಲಿಸಲು ಪ್ರಯತ್ನಿಸಲಿದ್ದಾರೆ.
ಆದರೆ ಅವರು ಮೂವರೂ ಬಂದರೂ ಸಹ ನಾನು ನನ್ನ ತೀರ್ಮಾನದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದಿರುವ ಜಗದೀಶ್ ಶೆಟ್ಟರ್, ನಮ್ಮ ಕುಟುಂಬಕ್ಕೆ ಟಿಕೆಟ್ ಕೊಡುವ ಪ್ರಮೇಯವೇ ಇಲ್ಲ. ನಾನೇ ಶಾಸಕ ಸ್ಥಾನದ ಸ್ಪರ್ಧಿ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ನಾಮಪತ್ರ ಸಲ್ಲಿಸಲು ಏ.೨೦ ರವರೆಗೂ ಸಮಯವಿದ್ದು ಅಷ್ಟರಲ್ಲಿ ವರಿಷ್ಠರು ನಿರ್ಧಾರ ಕೈಗೊಳ್ಳಲಿ ಎನ್ನುವ ಮೂಲಕ ಜಗದೀಶ್ ಹೈಕಮ್ಯಾಂಡ್‌ಗೆ ಬಿಸಿ ಮುಟ್ಟಿಸಿದ್ದಾರೆ.
