ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ವರುಣಾ ಸೇರಿದಂತೆ ಯಾವ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಲ್ಲ, ಕ್ಷೇತ್ರವನ್ನು ತಂದೆಗೆ ಬಿಟ್ಟುಕೊಡ್ತೀನಿ, ಓರ್ವ ಗನಾಗಿ ಅವರು ಸಿಎಂ ಆಗೋದು ನೋಡ್ಬೇಕು ಎಂದು ಯತೀಂದ್ರ ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ವರುಣಾದಿಂದ ನಿಲ್ಲುವುದು ಧೃಡವಾದ ಬಳಿಕ ಯತೀಂದ್ರ ಎಲ್ಲಿ ನಿಲ್ಲುತ್ತಾರೆಂಬ ಪ್ರಶ್ನೆ ಉದ್ಭವವಾಗಿತ್ತು. ಆದರೆ ಈಗ ಚುನಾವಣಾ ಅಖಾಡದಿಂದಲೇ ಹಿಂದೆ ಸರಿಯುತ್ತಿದ್ದೇನೆ ಎಂದು ಅವರು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ತಂದೆಯವರ ಪರವಾಗಿ ಜನವರಿಯಿಂದಲೇ ನಾನು ಪ್ರಚಾರ ಶುರು ಮಾಡಿದ್ದೇನೆ. ವರುಣಾ ಕ್ಷೇತ್ರ ಯಾವೊಬ್ಬ ವ್ಯಕ್ತಿಗೆ ಸೇರಿದ್ದಲ್ಲ. ತಂದೆಗಾಗಿ ನಾನು ಕ್ಷೇತ್ರ ತ್ಯಾಗ ಮಾಡಿಲ್ಲ. ವರುಣಾ ಕ್ಷೇತ್ರ ಸೇರಿದ್ದು ಆ ಕ್ಷೇತ್ರದ ಮತದಾರರಿಗೆ. ತಂದೆಯವರ ಕೊನೆ ಚುನಾವಣೆ ಹೀಗಾಗಿ ವರುಣಾದಲ್ಲಿ ನಿಲ್ಲಬೇಕೆಂಬುದು ಜನರ ಅಭಿಪ್ರಾಯ ಎಂದು ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಹೇಳಿದ ಯತೀಂದ್ರ, “ತಂದೆ ಅವರ ಕಾಲದಲ್ಲಿ ಉತ್ತಮ ಅಭಿವೃಧ್ಧಿ ಕೆಲಸ ಮಾಡಿದ್ದಾರೆ. ಮತ್ತೆ ಸಿಎಂ ಆದರೆ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಾರೆ. ಕಳೆದ ಬಾರಿ ಅವರು ಒಳ್ಳೆ ಆಡಳಿತ ಕೊಟ್ಟಿದ್ದರೂ ಕೂಡ ಜನ ಬಹುಮತ ನೀಡಿರಲಿಲ್ಲ. ಓರ್ವ ಮಗನಾಗಿ ಅವರು ಮತ್ತೆ ಸಿಎಂ ಆಗಬೇಕೆಂದು ನನಗೆ ಆಸೆ ಇದೆ” ಎಂದು ಹೇಳಿದ್ದಾರೆ.
