Tuesday, July 8, 2025
Homeಚುನಾವಣೆ 2023ಕಾಂಗ್ರೆಸ್ ಗೆ ಒಂದು ದೊಡ್ಡ ಶಕ್ತಿ ಬಂದಿದೆ - ಶೆಟ್ಟರ್ ರನ್ನು ಸ್ವಾಗತಿಸಿದ ಸಿದ್ದು

ಕಾಂಗ್ರೆಸ್ ಗೆ ಒಂದು ದೊಡ್ಡ ಶಕ್ತಿ ಬಂದಿದೆ – ಶೆಟ್ಟರ್ ರನ್ನು ಸ್ವಾಗತಿಸಿದ ಸಿದ್ದು

ಬೆಂಗಳೂರು: ಜಗದೀಶ್ ಶೆಟ್ಟರ್ ಆಗಮನ ಕಾಂಗ್ರೆಸ್ ಗೆ ಬಲತಂದಿದೆ. ನಾವು ನೂರೈವತ್ತಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ ಎಂದು ಕಾಂಗ್ರೆಸ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಗದೀಶ್ ಶೆಟ್ಟರ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರೀ ನಿಷ್ಟಾವಂತರಾಗಿದ್ದ ಜಗದೀಶ್ ಶೆಟ್ಟರ್ ತಮ್ಮ ಪಕ್ಷದಲ್ಲಿ ಬೇಸರಗೊಂಡು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅವರನ್ನು ಕಾಂಗ್ರೆಸ್ ಮನಪೂರ್ವಕವಾಗಿ ಸ್ವಾಗತಿಸುತ್ತದೆ ಎಂದರು.
ನಾನು ಮುಖ್ಯಮಂತ್ರಿಯಾದಾಗ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ವಿರೋಧಪಕ್ಷದ ನಾಯಕನಾಗಿದ್ದೆ. ಜಗದೀಶ್ ಶೆಟ್ಟರ್ ಕರ್ನಾಟಕ ಕಂಡಂತಹ ಸಜ್ಜನ ರಾಜಕಾರಣಿ. ಆರ್‌ಎಸ್‌ಎಸ್ ನಿಂದ ಬಂದಿದ್ದರೂ ಸಹ ಜಾತ್ಯಾತೀತವಾಗಿ ಕೆಲಸ ಮಾಡುತ್ತಿದ್ದರು. ಅವರನ್ನು ಹತ್ತಿರದಿಂದ ಕಂಡಿದ್ದೇನೆ. ವೈಯಕ್ತಿಕ ಕಾರ್ಯಕ್ಕೆ ಎಂದಿಗೂ ಫೋನ್ ಅಥವಾ ಭೇಟಿ ಮಾಡಿದವರಲ್ಲ. ವಿಧಾನಸಭೆಯ ಹೊರಗೆ ಒಳಗೆ ಹೋರಾಡಿದ್ದಾರೆ. ಬಿಜೆಪಿ ನೀತಿಯೊಂದಿಗೆ ಯಾವತ್ತೂ ರಾಜಿ ಮಾಡಿಕೊಂಡವರಲ್ಲ. ತಮ್ಮ ಸ್ವಾರ್ಥಕ್ಕೆ ಪಕ್ಷದ ಸಿದ್ದಾಂತವನ್ನು ಬಲಿ ಕೊಟ್ಟವರಲ್ಲ. ವಿರೋಧ ಪಕ್ಷದ ಕೆಲಸವನ್ನು ನಿಷ್ಟೂರವಾಗಿ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಜಗದೀಶ್ ಶೆಟ್ಟರ್ ಉತ್ತರ ಕರ್ನಾಟಕದ ನಾಯಕರಷ್ಟೇ ಅಲ್ಲ, ಇಡೀ ರಾಜ್ಯದ ನಾಯಕರು ಎಂದ ಸಿದ್ದರಾಮಯ್ಯ, ಬೃಹತ್ ಲಿಂಗಾಯಿತ ಸಮಾಜದ ಎರಡನೇ ಅತಿದೊಡ್ಡ ನಾಯಕ ಜಗದೀಶ್ ಶೆಟ್ಟರ್. ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಇಬ್ಬರಿಗೂ ಬಿಜೆಪಿ ಅವಮಾನಿಸಿದೆ. ನೋಯಿಸಿ ಕಣ್ಣೀರು ಹಾಕಿಸಿದೆ. ಇಂಥ ಪರಿಸ್ಥಿತಿ ವಂಚನೆ ಯಾವ ಪಕ್ಷದಲ್ಲೂ ಯಾವ ನಾಯಕರಿಗೂ ಬರಬಾರದು ಎಂದರು.
ಕರ್ನಾಟಕದ ಕೆಲವೇ ಸ್ವಾಭಿಮಾನಿ ರಾಜಕಾರಣಿಗಳಲ್ಲಿ ಜಗದೀಶ್ ಶೆಟ್ಟರ್ ಕೂಡ ಒಬ್ಬರಾಗಿದ್ದು, ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಿರುವುದರಿಂದ ತಮ್ಮ ಸಮುದಾಯದ ಹಿತಾಸಕ್ತಿಗಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ ಎಂದು ಸಿದ್ದರಾಮಯ್ಯ ನುಡಿದರು.

ಹೆಚ್ಚಿನ ಸುದ್ದಿ