ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೆ ಮುನ್ನ ಕೈ ಪಾಳೆಯಕ್ಕೆ ಶಾಕ್ ಎದುರಾಗಿದೆ. ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ತಿನ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ನನ್ನ ಧನ್ಯವಾದಗಳು ಹಾಗೂ ಆ ಪಕ್ಷಕ್ಕೆ ಒಳ್ಳೆಯದಾಗಲಿ. ದೀರ್ಘ ಆಲೋಚನೆಯ ಬಳಿಕ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಸುದರ್ಶನ್ ಹೇಳಿದ್ದಾರೆ.
ಸುದರ್ಶನ್ ಹಠಾತ್ ನಿವೃತ್ತಿ ಕುರಿತು ಊಹಾಪೋಹಗಳು ಎದ್ದಿದ್ದು, ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ಮೇಲೆ ಏ.25ರಂದು ಪತ್ರಿಕಾಗೋಷ್ಠಿ ನಡೆಸಿ ಎಲ್ಲಾ ವಿಚಾರ ಹಂಚಿಕೊಳ್ಳುವುದಾಗಿ ಸುದರ್ಶನ್ ತಿಳಿಸಿದ್ದಾರೆ.
ಕೋಲಾರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಸಹ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿದರೆ ಅವರಿಗೆ ಬೆಂಬಲ ನೀಡಿ ಪ್ರಚಾರ ನಡೆಸುವುದಾಗಿ ಸುದರ್ಶನ್ ಹೇಳುತ್ತಿದ್ದರು.
ಇನ್ನುಮುಂದೆ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಹಾಗೂ ರಾಜಕಾರಣದಲ್ಲಿ ಇರುವುದಿಲ್ಲ ಎಂದು ಹೇಳಿರುವ ಸುದರ್ಶನ್, ಜನಪರ, ಸಂವಿಧಾನ ಪರ, ಅಭಿವೃದ್ಧಿ ಪರ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತೇನೆ ಎಂದಿದ್ದಾರೆ.
