ಸೂರತ್: ಮೋದಿ ಸರ್‌ನೇಮ್ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮತ್ತೆ ಹಿನ್ನೆಡೆಯಾಗಿದೆ. ತನ್ನ ವಿರುದ್ಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಿಧಿಸಿದ್ದ ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸೂರತ್‌ನ ಸೆಷನ್ಸ್ ನ್ಯಾಯಾಲಯವು ತಿರಸ್ಕರಿಸಿದೆ.
2019 ರಲ್ಲಿ ಕೋಲಾರದಲ್ಲಿ ನಡೆದ ಚುನಾವಣಾ ಭಾಷಣ ಕಾರ್ಯಕ್ರಮದಲ್ಲಿ ಕೆ.ಹೆಚ್ ಮುನಿಯಪ್ಪ ಪರವಾಗಿ ಮತಪ್ರಚಾರ ನಡೆಸುತ್ತಿದ್ದ ರಾಹುಲ್ ಗಾಂಧಿ ಅವರು, ಲಲಿತ್ ಮೋದಿ, ನೀರವ್ ಮೋದಿ ಮೊದಲಾದವರನ್ನು ಉಲ್ಲೇಖಿಸಿ ಎಲ್ಲಾ ಕಳ್ಳರಿಗೂ ಮೋದಿ ಸರ್ ನೇಮ್ ಯಾಕಿದೆ ಎಂದು ಪ್ರಶ್ನಿದ್ದರು.
ಇದರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಗುಜರಾತ್ ಶಾಸಕ ಸುಶೀಲ್ ಮೋದಿ ಎಂಬವರು ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ರಾಹುಲ್ ಗಾಂಧಿ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿ, ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಅದರ ಬೆನ್ನಲ್ಲೇ ರಾಹುಲ್ ಗಾಂಧಿ ಅವರ ಸಂಸದ ಸ್ಥಾನ ಅನರ್ಹಗೊಂಡಿತ್ತು.
ಸೂರತ್ ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಾಬಿನ್ ಮೊಗೇರ ಅವರು ರಾಹುಲ್ ವಿರುದ್ಧದ ತೀರ್ಪಿಗೆ ತಡೆ ನೀಡಲು ನಿರಾಕರಿಸಿದ್ದಾರೆ.