ಬೆಂಗಳೂರು: 124 ಕ್ಷೇತ್ರಗಳಿಗೆ ಮೊದಲ ಪಟ್ಟಿ, 42 ಅಭ್ಯರ್ಥಿಗಳ 2ನೇ ಪಟ್ಟಿ ಬಳಿಕ, 43 ಕ್ಷೇತ್ರಗಳಿಗೆ ಕಾಂಗ್ರೆಸ್ 3ನೇ ಪಟ್ಟಿ ಬಿಡುಗಡೆ ಮಾಡಿದೆ. ಒಟ್ಟು 209 ಕ್ಷೇತ್ರಗಳಿಗೆ ಕಾಂಗ್ರೆಸ್ ಉಮೇದುವಾರರು ತಯಾರಾಗಿದ್ದಾರೆ.
ಆದರೆ, ಇನ್ನೂ 15 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಬಾಕಿ ಇದೆ. ಕೊನೆಯ ಕ್ಷಣದಲ್ಲಿ ಪಕ್ಷಕ್ಕೆ ಬಂದಿರುವ ಲಕ್ಷ್ಮಣ ಸವದಿ ಜತೆಗೆ ಕೆ.ಎಂ.ಶಿವಲಿಂಗೇಗೌಡ ಸೇರಿ ಎಲ್ಲ ವಲಸಿಗರಿಗೂ ಟಿಕೆಟ್ ಸಿಕ್ಕಿದೆ. ಒಟ್ಟಾರೆ 16 ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಕಾಂಗ್ರೆಸ್ ಮಣೆ ಹಾಕಿದೆ. ಕೋಲಾರದಲ್ಲಿ ಸ್ಪರ್ಧೆ ಮಾಡುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಸೆಗೆ ಎಐಸಿಸಿ ಹೈಕಮಾಂಡ್ ತಣ್ಣೀರೆರಚಿದೆ.
ಮೂರನೇ ಪಟ್ಟಿಯಲ್ಲೂ ನಾಲ್ವರು ಹಾಲಿ ಶಾಸಕರಿಗೆ ಟಿಕೆಟ್ ಘೋಷಣೆಯಾಗದೆ, ಅತಂತ್ರ ಸ್ಥಿತಿ ಮುಂದುವರಿದಿದೆ. ಶಿಗ್ಗಾಂವಿಯಲ್ಲಿ ವಿನಯ್ ಕುಲಕರ್ಣಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ನಿಲ್ಲುವುದಿಲ್ಲ. ಅಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿ ನಿಲ್ಲುತ್ತಾರೆ. ಭಾನುವಾರ ಅಥವಾ ಸೋಮವಾರ ಕಾಂಗ್ರೆಸ್‌ನ 3ನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹಳಿಯಾಳದಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ನಡುವೆ ಬಿಜೆಪಿಗೆ ರಾಜೀನಾಮೆ ನೀಡಿರುವ ಜಗದೀಶ್ ಶೆಟ್ಟರ್ ಅವರನ್ನು, ಕಾಂಗ್ರೆಸ್ ಪಕ್ಷಕ್ಕೆ ಸೇರುವುದಾದರೆ ಅವರಿಗೆ ಸ್ವಾಗತ ಎಂದು ಬಹಿರಂಗವಾಗಿಯೇ ಪಕ್ಷಕ್ಕೆ ಸ್ವಾಗತ ಕೋರಿದ್ದರು ಸಿದ್ದರಾಮಯ್ಯ. ಹುಬ್ಬಳ್ಳಿ-ಧಾರವಾಡ ಕ್ಷೇತ್ರಕ್ಕೆ ಇನ್ನು ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಹೀಗಾಗಿ ಜಗದೀಶ್ ಶೆಟ್ಟರ್ ಈ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಇನ್ನುಳಿದ 15 ಕ್ಷೇತ್ರಕ್ಕೆ ಅಭ್ಯರ್ಥಿಗಳಾರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
