ನವದೆಹಲಿ: ದಶಕಗಳಿಂದ ಭಾರತದ ವಿರುದ್ಧ ಗಡಿಯಾಚೆಗಿನ ಆಕ್ರಮಣದಲ್ಲಿ ತೊಡಗಿರುವ ಶಕ್ತಿಗಳಿಗೆ ಈಗಿನ ಭಾರತ ‘ವಿಭಿನ್ನ ಭಾರತ’ ಎಂದು ತಿಳಿದಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಉಗಾಂಡಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, ಚೀನಾ ಮತ್ತು ಪಾಕಿಸ್ತಾನದ ಭದ್ರತಾ ಸವಾಲುಗಳನ್ನು ಭಾರತ ಎದುರಿಸಬಹುದು ಎಂದು ಹೇಳಿದರು.
“ಇಂದು ಸವಾಲುಗಳನ್ನು ಎದುರಿಸಬಲ್ಲ ಹೊಸ ಭಾರತವನ್ನು ಜನರು ನೋಡುತ್ತಿದ್ದಾರೆ. ಉರಿ ಇರಲಿ, ಬಾಲಾಕೋಟ್ ಇರಲಿ ರಾಷ್ಟ್ರೀಯ ಭದ್ರತೆಯ ಸವಾಲುಗಳನ್ನು ಭಾರತ ಎದುರಿಸುತ್ತದೆ’ ಎಂದವರು ಹೇಳಿದರು.
ಇದೇ ಸಂದರ್ಭ ಚೀನಾ ಗಡಿಯಲ್ಲಿನ ಸವಾಲುಗಳ ಬಗ್ಗೆಯೂ ಅವರು ಮಾತನಾಡಿದರು.
“ಕಳೆದ ಮೂರು ವರ್ಷಗಳಿಂದ, ಗಡಿ ಒಪ್ಪಂದಗಳನ್ನು ಉಲ್ಲಂಘಿಸಿ, ಚೀನಿಯರು ಸೇನೆಯನ್ನು ನಿಯೋಜಿಸಿದ್ದಾರೆ. ಇಂದು ಭಾರತೀಯ ಸೈನಿಕರನ್ನು ಅತ್ಯಂತ ಎತ್ತರದಲ್ಲಿ ಮತ್ತು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ನಿಯೋಜಿಸಲಾಗಿದೆ” ಎಂದು ಅವರು ಹೇಳಿದರು.
