ಈ ಬಾರಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜಾತ್ಯಾತೀತ ಪಕ್ಷಗಳಿಗೆ ಬೆಂಬಲ ನೀಡಲು ಕಮ್ಯೂನಿಸ್ಟ್ ಪಕ್ಷಗಳು ತೀರ್ಮಾನಿಸಿವೆ. ಬಿಜೆಪಿ ವಿರೋಧಿ ಮತಗಳ ವಿಭಜನೆಯನ್ನು ತಡೆಯಲು ಕರಾವಳಿ ಜಿಲ್ಲೆಗಳ ಯಾವ ಕ್ಷೇತ್ರದಲ್ಲೂ ಸಿಪಿಐ(ಎಂ) ಹಾಗೂ ಸಿಪಿಐ ಪಕ್ಷಗಳು ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದೆ.
ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜಾತ್ಯತೀತ ಮತಗಳನ್ನು ಕ್ರೋಢೀಕರಿಸಬೇಕು ಎಂದು ಎರಡೂ ಪಕ್ಷಗಳು ತೀರ್ಮಾನಿಸಿದ್ದು, ಜಾತ್ಯಾತೀತ ಸಿದ್ದಾಂತ ಹೊಂದಿರುವ ಅಭ್ಯರ್ಥಿಗಳಿಗೆ ಬೆಂಬಲ ನೀಡುವುದಾಗಿ ಹೇಳಿದೆ.
”ಕರಾವಳಿ ಜಿಲ್ಲೆಗಳಲ್ಲಿ ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ, ಆದರೆ, ಜಾತ್ಯತೀತ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಸಕ್ರಿಯರಾಗಿದ್ದೇವೆ. ಏಪ್ರಿಲ್ 18ರಂದು ಸಭೆ ಕರೆದಿದ್ದು ಈ ಸಭೆಯಲ್ಲಿ ಜಾತ್ಯಾತೀತ ಪಕ್ಷಗಳಲ್ಲಿ ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧಾರ ಕೈಗೊಳ್ಳುತ್ತೇವೆ” ಎಂದು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ತಿಳಿಸಿದ್ದಾರೆ.
”ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಮತ್ತು ಅದರ ಜನವಿರೋಧಿ ನೀತಿಗಳನ್ನು ಸೋಲಿಸುವುದೇ ಎಡಪಕ್ಷಗಳ ಗುರಿ” ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
