ತಮಿಳುನಾಡು: ಹಲವು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು (ಎ.8ರಂದು) ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಸಂಜೆ 3 ಗಂಟೆಗೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಲಿರುವ ಅವರು ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಇದರ ವೆಚ್ಚ 1200 ಕೋಟಿಗಿಂತಲೂ ಹೆಚ್ಚು ಎನ್ನಲಾಗಿದೆ.
ನರೇಂದ್ರ ಮೋದಿ ಭೇಟಿಗೆ ತಮಿಳುನಾಡು ಜನ ಟ್ವಿಟರ್‌ನಲ್ಲಿ ವಣಕ್ಕಂ ಮೋದಿ ವರ್ಸಸ್ ಗೋ ಬ್ಯಾಕ್ ಮೋದಿ ಟ್ವಿಟರ್ ವಾರ್ ಶುರು ಮಾಡಿದ್ದಾರೆ. ಮೋದಿ ಭೇಟಿಯನ್ನು ವಿರೋಧಿಸಿ ಮತ್ತು ಮೋದಿಯವರನ್ನು ಸ್ವಾಗತಿಸಿ ಎರಡು ಹ್ಯಾಶ್ ಟ್ಯಾಗ್ ಗಳು ಟ್ರೆಂಡ್ ಆಗಿವೆ.
ಮೋದಿಯವರನ್ನು ವಿರೋಧಿಸಿ ಗೋ ಬ್ಯಾಕ್ ಮೋದಿ ಹ್ಯಾಶ್ ಟ್ಯಾಗ್ ಜೊತೆ ಹಲವರು ಟ್ವೀಟ್ ಮಾಡಿದ್ದು, ವ್ಯಂಗ್ಯಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಪೆರಿಯಾರ್ ಮತ್ತು ಮೋದಿ ಫೋಟೋಗಳನ್ನು ಹಂಚಿಕೊಂಡು ಪೆರಿಯಾರ್ ನಾಡಿನಲ್ಲಿ ಮೋದಿಗೆ ಸ್ವಾಗತವಿಲ್ಲ ಎಂದಿದ್ದಾರೆ.
‘ಪೆರಿಯಾರ್ ಅವರ ನಾಡಾದ ತಮಿಳುನಾಡಿನಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು, ದಲಿತರು, ಇತರ ಜಾತಿಗಳ ಜನರು ಸೌಹಾರ್ದಿಂದ ಬದುಕುತ್ತಿದ್ದಾರೆ. ಆದರೆ ಬಿಜೆಪಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದ್ದು ತಮಿಳುನಾಡಿನ ಸೌಹಾರ್ದಕ್ಕೆ ಧಕ್ಕೆ ತರುತ್ತಿದೆ.ಇದಕ್ಕಾಗಿ ಮೋದಿಯನ್ನು ನಾನು ವಿರೋಧಿಸುತ್ತೇನೆ ಎನ್ನುವ ವಿಡಿಯೊ ವೈರಲ್ ಆಗಿದೆ.
ಮೋದಿ ಭೇಟಿಯನ್ನು ವಿರೋಧಿಸಿ ಗೋ ಬ್ಯಾಕ್ ಮೋದಿ ಎಂಬ ಘೋಷಣೆ ಇರುವ 1 ಲಕ್ಷ ಕಪ್ಪು ಬಲೂನುಗಳನ್ನು ಹಾರಿಬಿಡಲಾಗುವುದು ಎಂದು ಈ ವಿಡಿಯೊದಲ್ಲಿ ಹೇಳಲಾಗಿದೆ.
ಮತ್ತೊಂದು ಕಡೆ ಪ್ರಧಾನಿ ಮೋದಿಯನ್ನು ಸ್ವಾಗತಿಸುವರು ಮೋದಿ ಸಾಧನೆಗಳ ಪಟ್ಟಿಗಳನ್ನು ಹಾಕಿ ಪ್ರಧಾನಿ ಮೋದಿಗೆ ಸ್ವಾಗತ ಎನ್ನುತ್ತಿದ್ದಾರೆ. ಪ್ರತಿ ಬಾರಿ ಮೋದಿ ತಮಿಳುನಾಡು ಭೇಟಿಯ ಸಂದರ್ಭ ಟ್ವಿಟರ್ ನಲ್ಲಿ ಗೋಬ್ಯಾಕ್ ಮೋದಿ, ವೆಲ್ ಕಂ ಮೋದಿ ಟ್ರೆಂಡ್ ಆಗುತ್ತದೆ.