ಲಿಂಗಾಯತ ಸಮುದಾಯದ ವಿರುದ್ಧ ತಾನು ಮಾತನಾಡಿದ್ದೇನೆ ಎನ್ನಲಾದ ವರದಿಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಇವೆಲ್ಲವೂ ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯ ಸೃಷ್ಟಿ ಎಂದು ವಿಪಕ್ಷದ ಮೇಲೆ ಆರೋಪಿಸಿದ್ದಾರೆ.
ಬಿಎಸ್‌ವೈ ಕುಟುಂಬದ ಮೇಲೆ ಪದೇ ಪದೇ ಪರೋಕ್ಷ ಟಾಂಗ್ ನೀಡುತ್ತಾ ಬಂದಿರುವ ಸಿಟಿ ರವಿ, ಲಿಂಗಾಯತರ ಬಗ್ಗೆ ಆಡಿದ್ದಾರೆನ್ನಲಾದ ಮಾತಿನ ವಿರುದ್ಧ ಅಸಮಾಧಾನಗೊಂಡಿರುವ ವೀರಶೈವ ಲಿಂಗಾಯತ ಸಮುದಾಯ ಸಿಟಿ ರವಿಯನ್ನು ಕಂಡಲ್ಲಿ ಮುತ್ತಿಗೆ ಹಾಕುವ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸುತ್ತಿದ್ದಂತೆ ಸಿಟಿ ರವಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
“ಇವುಗಳೆಲ್ಲವೂ ಸುಳ್ಳು ಸುದ್ದಿಗಳು. ನಾನು ಕನಸಿನಲ್ಲಿಯೂ ಜಾತಿ ರಾಜಕಾರಣ ಮಾಡಿಲ್ಲ. ಜಾತಿಯ ಬಗ್ಗೆ ಯೋಚನೆ ಕೂಡಾ ನಾನು ಮಾಡುವುದಿಲ್ಲ. ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿ ಲಿಂಗಾಯತ ವಿರೋಧಿ ಭಾವನೆ ಹುಟ್ಟು ಹಾಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇದರ ಹಿಂದೆ ಕಾಂಗ್ರೆಸ್ ಕೈವಾಡ ಇದೆ.” ಎಂದು ಸಿಟಿ ರವಿ ಹೇಳಿದ್ದಾರೆ.
ʼನಮಗೆ ಲಿಂಗಾಯತ ಮತಗಳು ಬೇಕಾಗಿಲ್ಲʼ ಎಂದು ಸಿಟಿ ರವಿ ಹೇಳಿರುವುದಾಗಿ ಸುದ್ದಿ ಬಿತ್ತರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯಾಗಿತ್ತು. ಬಿಜೆಪಿಗೆ ಪ್ರಬಲ ಮತಬ್ಯಾಂಕ್ ಆಗಿರುವ ಲಿಂಗಾಯತ ಸಮುದಾಯದ ವಿರುದ್ಧವೇ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಂತಹ ಹೇಳಿಕೆ ನೀಡುವರೇ ಎಂಬ ಬಗ್ಗೆ ಚರ್ಚೆಗಳು ನಡೆದಿದ್ದವು.
ಸಿಟಿ ರವಿಗೆ ಬಿಎಸ್‌ವೈ ಕುಟುಂಬದ ಮೇಲಿರುವ ಅಸಮಾಧಾನವು ಲಿಂಗಾಯತ ವಿರೋಧಿಯಾಗಿ ಮಾರ್ಪಟ್ಟಿದೆ ಎಂಬರ್ಥದಲ್ಲೂ ಚರ್ಚೆಗಳು ನಡೆದಿದ್ದವು.