ಕೋಲಾರ: ಕೋಲಾರದಲ್ಲಿ ಮಾಡಿರುವ ಭಾಷಣಕ್ಕೆ ಸಂಸದ ಸ್ಥಾನ ಕಳೆದುಕೊಂಡಿರುವ ರಾಹುಲ್ ಗಾಂಧಿ ಮತ್ತೆ ಕೋಲಾರಕ್ಕೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅದಾನಿಗೆ ಸಾವಿರಾರು ಕೋಟಿ ಸಹಾಯ ಮಾಡಲು ನಿಮಗೆ ಸಾಧ್ಯವಾಗುವುದಾದರೆ ಅದೇ ಸಹಾಯವನ್ನು ದೇಶದ ಜನರಿಗೆ ಮಾಡಲು ನಮ್ಮಿಂದಲೂ ಸಾಧ್ಯವಿದೆ ಎಂದು ಹೇಳಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ತಮ್ಮ ವೈಫಲ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
ಅದಾನಿಯಂತಹ ಉದ್ಯಮಿಗಳಿಗೆ ಸಾವಿರಾರು ಕೋಟಿ ಹಣ ನೀಡುವುದಾದರೆ, ನಾವು ಕೂಡ ದೇಶದ ಜನರಿಗೆ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಿದೆ. ನೀವು ಅದಾನಿ ಅವರಿಗೆ ನೆರವು ನೀಡಿದರೆ, ನಾವು ಬಡ ಜನರು, ರೈತರು, ಮಹಿಳೆಯರು, ಯುವಕರಿಗೆ ಸಹಾಯ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮುಂಬೈ ವಿಮಾನ ನಿಲ್ದಾಣ ಅದಾನಿಗೆ ಕೊಟ್ಟರು. ಪ್ರಧಾನಿ ಆಸ್ಟ್ರೇಲಿಯಾದ ವೇದಿಕೆಯಲ್ಲಿ ಅದಾನಿ ಹಾಗೂ ಎಸ್‌ಬಿಐ ಅಧಿಕಾರಿಗಳು ಕೂತಿದ್ದರು. ನಂತರ ಸಾವಿರಾರು ಕೋಟಿ ಹಣವನ್ನು ಎಸ್‌ಬಿಐ ನಿಂದ ಅದಾನಿ ಅವರಿಗೆ ಸಾಲ ಸಿಗುತ್ತದೆ. ಯಾವ ಅಧಿಕಾರದಿಂದ ಈ ಸಾಲ ಕೊಟ್ಟರು. ಶ್ರೀಲಂಕಾ ಬಂದರಿನ ಅಧ್ಯಕ್ಷರ ಪ್ರಕಾರ ಲಂಕಾದ ಬಂದರುಗಳನ್ನು ಅದಾನಿ ಅವರಿಗೆ ನೀಡಲು ಮೋದಿ ಅವರು ಹೇಳಿದ್ದರು . ಮೋದಿ ಅವರು ಬಾಂಗ್ಲಾದೇಶ ಪ್ರವಾಸ ಮಾಡಿದ ಬೆನ್ನಲ್ಲೇ ಅದಾನಿ ಅವರಿಗೆ ಬಾಂಗ್ಲಾದೇಶದಲ್ಲಿ ಗುತ್ತಿಗೆ ಸಿಗುತ್ತದೆ. ಪ್ರಧಾನಿ ಇಸ್ರೇಲ್ ಪ್ರವಾಸ ಮಾಡಿದ ನಂತರ ಅಲ್ಲಿಯೂ ಅದಾನಿ ಅವರಿಗೆ ಬಂದರು ಹಾಗೂ ರಕ್ಷಣಾ ವಲಯದ ಗುತ್ತಿಗೆಯನ್ನು ಕೊಡಿಸುತ್ತಾರೆ. ಹೀಗಾಗಿ ಪ್ರಧಾನಮಂತ್ರಿಗಳಿಗೆ ಅದಾನಿ ಅವರ ಬೋನಾಮಿ ಕಂಪನಿಗಳು ಯಾರದ್ದು, ಇದರಲ್ಲಿರುವ 20 ಸಾವಿರ ಕೋಟಿ ಯಾರದ್ದು ಎಂದು ಕೇಳಿದೆ. ಅಷ್ಟಕ್ಕೆ ಸಂಸತ್ತಿನ ಕಲಾಪ ನಿಲ್ಲಿಸಿದರು ಎಂದು ರಾಹುಲ್ ಹೇಳಿದ್ದಾರೆ.