Monday, October 13, 2025
Homeಚುನಾವಣೆ 2023ಬಿಜೆಪಿ ಮೂಲಕ ರಾಜಕೀಯ ಅಖಾಡಕ್ಕೆ ಕಿಚ್ಚ ಸುದೀಪ್...!?

ಬಿಜೆಪಿ ಮೂಲಕ ರಾಜಕೀಯ ಅಖಾಡಕ್ಕೆ ಕಿಚ್ಚ ಸುದೀಪ್…!?

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಬಿಸಿ ಹೆಚ್ಚಾಗಿದ್ದು, ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಸಿನಿಮಾ ಸ್ಟಾರ್‌ ಗಳತ್ತ ವಾಲಿದ್ದಾರೆ. ಬಿಜೆಪಿ ಕೂಡ ಈ ಕಸರತ್ತು ನಡೆಸಿದ್ದು, ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ.

ನಟ ಕಿಚ್ಚ ಸುದೀಪ ಇಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಅನೇಕ ರಾಜಕೀಯ ನಾಯಕರ ಜೊತೆ ನಟ ಕಿಚ್ಚ ಸುದೀಪ್​ ಒಡನಾಟ ಹೊಂದಿದ್ದು. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸುದೀಪ್​ ಅವರನ್ನು ರಾಜಕೀಯ ಕರೆತರುವ ಪ್ರಯತ್ನಗಳು ನಡೀತಿದೆ. ಇಂದು ಮಧ್ಯಾಹ್ನ 1:30 ಕ್ಕೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಸುದೀಪ್‌ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಈ ಬಗ್ಗೆ ಬಿಜೆಪಿಯಾಗಲಿ ಅಥವಾ ಕಿಚ್ಚ ಸುದೀಪ್ ಆಗಲಿ ಯಾವುದೇ ಹೇಳಿಕೆ ನೀಡಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಎರಡು ಪ್ರತ್ಯೇಕ ಸುದ್ದಿಗೋಷ್ಠಿ ಆಯೋಜಿಸಿದ್ದು, ಸುದೀಪ್ ಬಿಜೆಪಿ ಸೇರ್ತಾರಾ, ಇಲ್ಲವಾ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.

ಈಗಾಗಲೇ ಕಾಂಗ್ರೆಸ್‌ ಹಾಗೂ ಬಿಜೆಪಿಯ ನಾಯಕರು ನಟ ಸುದೀಪ್‌ ಅವರನ್ನ ಪಕ್ಷಕ್ಕೆ ಕರೆತರು ನಿಟ್ಟಿನಲ್ಲಿ ಸಾಕಷ್ಟು ಬಾರಿ ಚರ್ಚೆ ನಡೆದಿವೆ ಎಂದು ಹೇಳಲಾಗಿದೆ. ಅದು ಅಲ್ಲದೇ ಬಿಜೆಪಿ ಘಟಾನುಘಟಿ ನಾಯಕರನ್ನ ಪಕ್ಷದತ್ತ ಸೆಳೆಯಲು ರಣತಂತ್ರ ರೂಪಿಸಿದೆ. ನಟ ಸುದೀಪ್ ಮನವೊಲಿಕೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅಖಾಡಕ್ಕಿಳಿದ್ದಿದ್ದಾರೆ. ಇಬ್ಬರು ನಾಯಕರ ಜೊತೆಗೆ ಕಿಚ್ಚ ಸುದೀಪ್​ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ.

ಹೆಚ್ಚಿನ ಸುದ್ದಿ