ಬೆಂಗಳೂರು ಕಾಲ್ತುಳಿತ ಪ್ರಕರಣ ರಾಜ್ಯ ಸರ್ಕಾದ ಕೊರಳಿಗೆ ಸುತ್ತಿಕೊಂಡಿದ್ದು, ರಾಜ್ಯಾದ್ಯಂತ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಪೊಲೀಸರು ಭದ್ರತಾ ದೃಷ್ಟಿಯಿಂದ ಸದ್ಯಕ್ಕೆ ಸೆಲೆಬ್ರೇಷನ್ ಬೇಡ ಅಂದ್ರು ಖಾಕಿ ಮಾತು ಧಿಕ್ಕರಿಸಿ ಕಾರ್ಯಕ್ರಮ ಮಾಡಿದ್ರಾ ಅನ್ನೋ ಗುಮಾನಿ ಎದ್ದಿದೆ. ಭದ್ರತಾ ಕುರಿತು ಡಿಸಿಪಿ ಬರೆದ ಪತ್ರ ಈಗ ರಾಜ್ಯದಲ್ಲಿ ಹಲ್ ಚಲ್ ಎಬ್ಬಿಸಿದೆ. ಡಿಸಿಪಿ ಪತ್ರ ವೈರಲ್ ಆಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ತುರ್ತು ಮೀಟಿಂಗ್ ನಡೆಸಿದ್ದಾರೆ. ಸಭೆಯಲ್ಲಿ ಸಿದ್ದರಾಮಯ್ಯ ಫುಲ್ ಗರಂ ಆಗಿದ್ದರು ಎಂಬ ಮಾಹಿತಿ ಇದೆ, ಡಿಸಿಪಿ ಬರೆದ ಪತ್ರ ವೈರಲ್ ಆಗಿದ್ದು ಹೇಗೆ?, ಸಾವಿನ ಬಗ್ಗೆ ನನಗೆ ಪೊಲೀಸರು ಯಾಕೆ ತಿಳಿಸಲಿಲ್ಲ ಎಂದು ಸಿಟ್ಟು ಹೊರಹಾಕಿದ್ರಂತೆ..
ಯೆಸ್. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಹೊಣೆಯನ್ನು ಹೊತ್ತುಕೊಳ್ಳಲು ಸರ್ಕಾರ ರೆಡಿ ಇಲ್ಲ, ಈ ಆಪತ್ತಿಂದ ಪಾರಾಗಲು ಸರ್ಕಾರ ಸರ್ಕಸ್ ಮಾಡುತ್ತಿದೆ. ಇಡೀ ಪ್ರಕರಣವನ್ನು ಈಗ ಪೊಲೀಸ್ ಇಲಾಖೆ ಕಡೆ ತಿರುಗಿಸಿ ಕೈ ತೊಳೆದುಕೊಳ್ಳುವ ಕೆಲಸ ಮಾಡ್ತಿದೆ, ಸಿದ್ದರಾಮಯ್ಯ ಕೂಡ ಈ ಘಟನೆಗೂ ಸರ್ಕಾರಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಸರ್ಕಾರದ ವತಿಯಿಂದ ವಿಧಾನಸೌಧದಲ್ಲಿ ಕಾರ್ಯಕ್ರಮ ಮಾಡಿದ್ದೇವೆ ಅಲ್ಲಿ ಏನಾದ್ರೂ ಭದ್ರತಾ ಲೋಪ ಆಗಿದೆಯಾ?, ದುರಂತ ನಡೆದಿದ್ದು ಕ್ರೀಡಾಂಗಣದ ಬಳಿ. ಅದಕ್ಕು ನಮಗೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಪೊಲೀಸರು ನನಗೆ ಸಾವಿನ ಸುದ್ದಿಯನ್ನು ಹೇಳಿಲ್ಲ, ನನಗೆ ಗೊತ್ತಾಗಿದ್ದೇ ಸಂಜೆ ಎಂದು ನುಣುಚಿಕೊಂಡಿದ್ದಾರೆ. ಹೀಗೆ ಎಲ್ಲ ತಪ್ಪನ್ನು ಪೊಲೀಸರ ಮೇಲೆ ಎತ್ತಿಹಾಕುವ ಟೈಮ್‌ನಲ್ಲೇ ಈಗ ಡಿಸಿಪಿ ಬರೆದ ಪತ್ರ ಭಾರೀ ಸದ್ದು ಮಾಡುತ್ತಿದೆ. ಈ ಪತ್ರ ವೈರಲ್ ಆಗುತ್ತಿದ್ದಂತೆ ಕಸಿವಿಸಿಕೊಂಡ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಗೃಹ ಸಚಿವರು, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಡಿಜಿಪಿ ಸಲೀಂ, ಸರ್ಕಾರದ ಸಿಬ್ಬಂದಿ, ಆಡಳಿತ ಇಲಾಖೆ ಕಾರ್ಯದರ್ಶಿ ಸತ್ಯವತಿ ಸೇರಿ ಹಲವು ಅಧಿಕಾರಿಗಳು ಭಾಗಿಯಾಗಿದ್ದಾರೆ.