
ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎನ್ನುವದಕ್ಕೆ ಸಾಕ್ಷಿಯ ಮಹಿಳಾ ಸ್ವಚ್ಛ ವಾಹನಿ ಸಾರಥಿ ಈರಮ್ಮ
ಹಾಬಲಕಟ್ಟಿ ಗ್ರಾಮ ಪಂಚಾಯತಿಯ ಸ್ವಚ್ಛ ವಾಹಿನಿಯ ಸಾರಥಿ. ಇವರು ಓದಿದ್ದು ಪಿಯುಸಿ ತನಕ. ತಾಯಿ ಮತ್ತು 3 ಸಹೋದರಿಯರ ಕುಟುಂಬ ಇವರದು. “ನಾನು ಈ ಕೆಲಸಕ್ಕೆ ಬರಲು ಮುಖ್ಯ ಕಾರಣ ನನ್ನ ಅಕ್ಕ ನಾನು ವಾಹನ ಚಾಲಕಿ ತರಬೇತಿಗೆ ಹೋಗಲ್ಲ, ನಂಗೆ ಈ ಕೆಲಸ ಸಾಧ್ಯವಿಲ್ಲ ಎಂದು ಹಠ ಹಿಡಿದು ಕೂತಿದ್ದ ನನಗೆ ಧೈರ್ಯ ತುಂಬಿ ಪ್ರೋತ್ಸಾಹಿಸಿದ್ದು ನನ್ನ ತಾಯಿ ಹಾಗೂ ನಮ್ಮ ಮನೆಯ ಅಕ್ಕ ತಂಗಿ ಯವರು.” ಎನ್ನುತ್ತಾರೆ ಈರಮ್ಮಎದುರಿಸಿದ ಸವಾಲುಗಳು: ಮೊದಲು ವಾಹನ ಚಾಲನೆ ಮಾಡುವಾಗ “ಅಯ್ಯೋ ಇವಳೇನು ಗಂಡಸರ ತರ ಗಾಡಿ ಓಡಿಸುತ್ತಾಳೆ. ಇವಳಿಗ್ಯಾಕೆ ಬೇಕು ಈ ಗಂಡು ಮಕ್ಕಳು ಮಾಡುವ ಕೆಲಸ” , “ಗಾಡಿ ಹಾಯಿಸಿದರೆ ಗೊತ್ತಾಗುತ್ತೆ”, ಹೀಗೆಲ್ಲಾ ಮಾತಾಡಿಕೊಳ್ಳುತ್ತಿದ್ದರು. ನಾನು ಮನೆಗೆ ಬಂದು ನನ್ನ ತಾಯಿ ಬಳಿ ಬಂದು ನಡೆದದ್ದನ್ನು ಹೇಳಿಕೊಳ್ಳುತ್ತಿದ್ದೆ. ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಪಿಡಿಓ ಗ್ರಾಮ ಪಂಚಾಯತಿ ಅಧ್ಯಕ್ಷರು ನನ್ನ ತಾಯಿ ಸಮಾನರು ಶ್ರೀಮತಿ ಕಲ್ಲವ್ವ ಅಮಿನಪ್ಪ ವಾರಿಕಲ್ಲ ಧೈರ್ಯ ಕೊಟ್ಟಿದಾರೆ ಸಮಾಧಾನದಿಂದ ಏನೂ ಆಗಲ್ಲ. ಈಗ ತೆಗಳುವವರು ನಾಳೆ ದಿನ ನಿನ್ನ ಬಗ್ಗೆ ಹೊಗಳಿಕೆ ವ್ಯಕ್ತ ಪಡಿಸುತ್ತಾರೆ. ಇಂಥ ಮಾತಿಗೆ ಕಿವಿಗೊಡಬೇಡ ಎಂದು ಸಮಾಧಾನ ಮಾಡುತ್ತಿದ್ದರು.ನಾನು ತಾಯಿ ಮಾತಿನಂತೆ ಪ್ರತಿ ದಿನ ಮನೆ ಮನೆಗಳಿಂದ ಕಸ ಸಂಗ್ರಹಣೆ ಮಾಡುತ್ತಲೇ ಬಂದೆ. ದಿನ ಕಳೆದಂತೆ ನಮ್ಮೂರಿನ ಜನ “ನೋಡು ನಮ್ಮೂರ ಹುಡುಗಿ ಕಸದ ಗಾಡಿ ಓಡಿಸುತ್ತಾಳೆ. ಭಾರಿ ಧೈರ್ಯವಂತೆ ಇದ್ದಾಳೆ” ಎಂದು ಮಾತಾಡಿಕೊಳ್ಳುತ್ತಾರೆ. ಈಗ ನನಗೂ ಖುಷಿಯಾಗುತ್ತೆ. ಎಲ್ಲರ ಸಹಕಾರದಿಂದ ಒಂದು ವಾಹನ ಚಲಾಯಿಸುವ ಧೃಢ ಮಹಿಳೆಯಾಗಿದ್ದೇನೆ. ನನ್ನ ಗೆಳತಿಯರು ಕೂಡ ಪೋನ್ ಮಾಡಿ ಖುಷಿ ವ್ಯಕ್ತಪಡಿಸುತ್ತಾರೆ.
ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಮೇಲೆ ನಡೆತ್ತಿರುವ ಅತ್ಯಾಚಾರ, ಶೋಷಣೆ ಗಮನಿಸಿದರೆ ಹೆಣ್ಣು ತನ್ನನ್ನು ತಾನೇ ರಕ್ಷಣೆ ಮಾಡಿಕೊಳ್ಳುವ ಪ್ರಸಂಗ ಬಂದಿದೆ. ಹೆಣ್ಣಿಗೆ ಎಷ್ಟೆ ಅಡತಡೆ ಬಂದರೂ ಅದನ್ನು ಮೆಟ್ಟಿ ನಿಲ್ಲಬೇಕು. ಪುರುಷರಿಗಿಂತ ನಾವೇನೂ ಕಡಿಮೆಯಿಲ್ಲ ಎಂಬ ಮನೋಭಾವನೆ ಬಂದಾಗ ಮಾತ್ರ ಹೆಣ್ಣು ಬದುಕಲು ಸಾಧ್ಯ ಎಂದು ಹೇಳಬಹುದು
ವರದಿ: ಯಮನೂರಪ್ಪ ಆರ್ ಅಬ್ಬಿಗೇರಿ
