Monday, August 3, 2026
Homeರಾಜ್ಯಅಂಜುಮನ್ ಅಖಾಡಕ್ಕೆ ಬಂದೇನವಾಜ ಎಂಟ್ರಿ ನಾಮಪತ್ರ ಸಲ್ಲಿಕೆ...!!!

ಅಂಜುಮನ್ ಅಖಾಡಕ್ಕೆ ಬಂದೇನವಾಜ ಎಂಟ್ರಿ ನಾಮಪತ್ರ ಸಲ್ಲಿಕೆ…!!!

ಮುದ್ದೇಬಿಹಾಳ :- ಪಟ್ಟಣದ ಅಂಜುಮನ್-ಇ-ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಂಗಳವಾರ ನಡೆದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿ ಬಂದೇನವಾಜ ಕುಮಸಿ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಅಂಜುಮನ್-ಇ-ಇಸ್ಲಾಂ ಕಚೇರಿಗೆ ಆಗಮಿಸಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ತಬಸುಮ್ ಮಹಿಷವಾಡಗಿ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಿತು. ಈ ವೇಳೆ ಬೆಂಬಲಿಗರು ಅಭ್ಯರ್ಥಿಗೆ ಶುಭಾಶಯ ಕೋರಿದರು.

ಚುನಾವಣೆಯಲ್ಲಿ ಈ ಬಾರಿ ಗೆಲುವು ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಂದೇನವಾಜ ಕುಮಸಿ ಅವರು, “ಅಂಜುಮನ್-ಇ-ಇಸ್ಲಾಂ ಸಂಸ್ಥೆಯ ಅಭಿವೃದ್ಧಿ, ಸಂರಕ್ಷಣೆ ಹಾಗೂ ಪಾರದರ್ಶಕ ಆಡಳಿತಕ್ಕಾಗಿ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸಿದ್ದೇನೆ. ಸಂಸ್ಥೆಯ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಬೆಳವಣಿಗೆ ವಿರುದ್ಧ ಧ್ವನಿ ಎತ್ತಿದ್ದೇನೆ. ಕಳೆದ ಚುನಾವಣೆಯಲ್ಲಿ ಕೇವಲ 20 ಮತಗಳ ಅಂತರದಿಂದ ಸೋಲು ಕಂಡಿದ್ದರೂ, ಸದಸ್ಯರ ಪ್ರೀತಿ ಮತ್ತು ವಿಶ್ವಾಸ ಕಡಿಮೆಯಾಗಿಲ್ಲ. ಈ ಬಾರಿ ಮತದಾರರು ನನ್ನ ಸೇವೆಯನ್ನು ಪರಿಗಣಿಸಿ ಆಶೀರ್ವದಿಸಲಿದ್ದಾರೆ ಎಂಬ ದೃಢ ನಂಬಿಕೆ ಇದೆ,” ಎಂದು ಹೇಳಿದರು.

ಸಂಸ್ಥೆಯ ಶೈಕ್ಷಣಿಕ, ಧಾರ್ಮಿಕ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಸ್ಪರ್ಧಿಸುತ್ತಿದ್ದು, ಸದಸ್ಯರ ಸಹಕಾರದೊಂದಿಗೆ ಅಂಜುಮನ್ ಸಂಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಸಂಕಲ್ಪ ಹೊಂದಿರುವುದಾಗಿ ಅವರು ತಿಳಿಸಿದರು.

ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾಜಿ ಅಂಜುಮನ್ ಸದಸ್ಯ ಅಬ್ದುಲ್ ಮಜೀದ ಮಕಾನದಾರ್, ಯುನಾಯತ್ ಮೋಮಿನ, ಹಸನ್ ಬಗವಾನ್ ಸೇರಿದಂತೆ ಹಲವು ಮುಖಂಡರು, ಹಿರಿಯರು, ಯುವಕರು ಹಾಗೂ ಅಪಾರ ಸಂಖ್ಯೆಯ ಬೆಂಬಲಿಗರು ಉಪಸ್ಥಿತರಿದ್ದು, ಅಭ್ಯರ್ಥಿಗೆ ಶುಭ ಹಾರೈಸಿದರು.ಅಂಜುಮನ್-ಇ-ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಗೆ ವಿವಿಧ ಅಭ್ಯರ್ಥಿಗಳು ಕಣಕ್ಕಿಳಿದಿರುವ ಹಿನ್ನೆಲೆಯಲ್ಲಿ ಸದಸ್ಯರ ಸಂಪರ್ಕ, ಪ್ರಚಾರ ಹಾಗೂ ಮತಯಾಚನೆ ಚುರುಕುಗೊಂಡಿದೆ. ಈ ಬಾರಿಯ ಚುನಾವಣೆಯು ಸದಸ್ಯರ ನಡುವೆ ತೀವ್ರ ಕುತೂಹಲ ಮೂಡಿಸಿದ್ದು, ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.

ಹೆಚ್ಚಿನ ಸುದ್ದಿ