Monday, August 3, 2026
Homeರಾಜ್ಯಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಫೈರ್ ಹೈಡ್ರಂಟ್ ಅಳವಡಿಕೆ: ದಿನೇಶ್ ಗುಂಡೂರಾವ್

ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಫೈರ್ ಹೈಡ್ರಂಟ್ ಅಳವಡಿಕೆ: ದಿನೇಶ್ ಗುಂಡೂರಾವ್

ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಫೈರ್ ಹೈಡ್ರಂಟ್ ಅಳವಡಿಕೆ: ದಿನೇಶ್ ಗುಂಡೂರಾವ್

ಬೆಂಗಳೂರು: ಟ್ಯಾಂಕ್ ಬಂಡ್ ರೋಡ್, ಆರ್ ಟಿ ಸ್ಟ್ರೀಟ್ ವೈಟ್ ಟ್ಯಾಪಿಂಗ್ ರಸ್ತೆ, ಈಜಿ ಶೌಚಾಲಯಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ
ಗಾಂಧಿನಗರ ಶಾಸಕರಾದ ದಿನೇಶ್ ಗುಂಡೂರಾವ್ ಗಾಂಧಿನಗರ ಹಾಗೂ ಮೆಜೆಸ್ಟಿಕ್ ಪ್ರದೇಶವು ನಗರದ ಅತ್ಯಂತ ಹಳೆಯ ಭಾಗವಾಗಿದ್ದು, ಹಲವು ವರ್ಷಗಳಿಂದ ಈ ಭಾಗದ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದೇ ರೀತಿಯಲ್ಲಿ ಮೂಲಸೌಕರ್ಯಗಳನ್ನೊಳಗೊಂಡ ಆಧುನಿಕ ರಸ್ತೆಗಳನ್ನು ಇತರೆ ಪ್ರದೇಶಗಳಲ್ಲಿಯೂ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಗಾಂಧಿನಗರ ಪೇಟೆ ಪ್ರದೇಶದಲ್ಲಿ ರಸ್ತೆಗಳು ಕಿರಿದಾಗಿರುವುದರಿಂದ ಅಗ್ನಿಶಾಮಕ ವಾಹನಗಳು ಸುಲಭವಾಗಿ ಸಂಚರಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಅಗ್ನಿ ಅವಘಡ ಸಂಭವಿಸಿದಾಗ ತಕ್ಷಣ ನೀರು ಪೂರೈಸಿ ಬೆಂಕಿ ನಂದಿಸಲು ಅನುಕೂಲವಾಗುವಂತೆ ಹೊಸದಾಗಿ ನಿರ್ಮಿಸಲಾಗುತ್ತಿರುವ ವೈಟ್ ಟಾಪಿಂಗ್ ರಸ್ತೆಗಳಲ್ಲಿ ಫೈರ್ ಹೈಡ್ರೆಂಟ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ವೈಟ್ ಟಾಪಿಂಗ್ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಎರಡು ಪ್ರಮುಖ ವಾಣಿಜ್ಯ ಸಂಪರ್ಕ ರಸ್ತೆಗಳ ವಿವರ:

1. ಟ್ಯಾಂಕ್ ಬಂಡ್ ರಸ್ತೆ (ಉಪ್ಪಾರಪೇಟೆ ಪೊಲೀಸ್ ಠಾಣೆಯಿಂದ ಶಾಂತಲಾ ಜಂಕ್ಷನ್ ವರೆಗೆ):

ಟ್ಯಾಂಕ್ ಬಂಡ್ ರಸ್ತೆ (ಉಪ್ಪಾರಪೇಟೆ ಪೊಲೀಸ್ ಠಾಣೆಯಿಂದ ಶಾಂತಲಾ ಜಂಕ್ಷನ್ ವರೆಗೆ) ಯನ್ನು 8.74 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ 418 ಮೀಟರ್ ಉದ್ದದ ಈ ಪ್ರಮುಖ ರಸ್ತೆಯಲ್ಲಿ 10.5 ಮೀಟರ್ ಅಗಲದ 180 ಎಂಎಂ ದಪ್ಪದ ವೈಟ್ ಟಾಪಿಂಗ್ ಮಾಡಲಾಗಿದೆ. ಬೃಹತ್ 1000 ಎಂಎಂ ವ್ಯಾಸದ ಮೆಳೆ ನೀರು ಚರಂಡಿ, ಪಾದಚಾರಿ ಸ್ನೇಹಿ ಫುಟ್‌ಪಾತ್ ಮತ್ತು ಚೇಂಬರ್‌ಗಳ ಮೂಲಕ ಸಮಗ್ರ ಯುಟಿಲಿಟಿ ಡಕ್ಟ್ಗಳನ್ನು (Power & OFC) ಅಳವಡಿಸಿ ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗಿದೆ.

ಬಿ.ಎಸ್‌.ಡಬ್ಲ್ಯೂ.ಎಂ.ಎಲ್ ವತಿಯಿಂದ ವಿನೂತನ “eeze” ಪ್ರಿಕಾಸ್ಟ್ ಸಾರ್ವಜನಿಕ ಶೌಚಾಲಯವನ್ನು ನಿರ್ಮಾಣ ಮಾಡಲಾಗಿದೆ. ಮೆಟ್ರೋ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಪ್ರಯಾಣಿಕರ ಅತಿ ಹೆಚ್ಚಿನ ದಟ್ಟಣೆಯನ್ನು ಹೊಂದಿರುವ ಈ ಕೇಂದ್ರ ಭಾಗದಲ್ಲಿ, ಟ್ಯಾಂಕ್ ಬಂಡ್ ರಸ್ತೆಯಲ್ಲಿ ಬಿಎಸ್‌ಡಬ್ಲ್ಯೂಎಂಎಲ್ ವತಿಯಿಂದ ವಿನೂತನ ಸಾರ್ವಜನಿಕ ಶೌಚಾಲಯ ಸಂಕೀರ್ಣ ‘eeze’ ಅನ್ನು ಸ್ಥಾಪಿಸಲಾಗಿದೆ. ಇದರ ತಳಪಾಯದಿಂದ ಹಿಡಿದು ಸಂಪೂರ್ಣ ಕಟ್ಟಡವನ್ನು ಸಂಪೂರ್ಣವಾಗಿ ಪ್ರಿಕಾಸ್ಟ್ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದ್ದು, ದುರ್ವಾಸನೆಯನ್ನು ತಡೆಗಟ್ಟಲು ಇದರಲ್ಲಿ ವಿಶಿಷ್ಟವಾದ Percolated ಪರಿಕಲ್ಪನೆಯನ್ನು ಅಳವಡಿಸಲಾಗಿದೆ. ಈ ಸುಸಜ್ಜಿತ ಶೌಚಾಲಯದಲ್ಲಿ ಪುರುಷರು, ಮಹಿಳೆಯರು, ಮಂಗಳಮುಖಿಯರು (Transgenders) ಮತ್ತು ವಿಕಲಚೇತನರಿಗೆ ಪ್ರತ್ಯೇಕ ವ್ಯವಸ್ಥೆಗಳಿದ್ದು, ಸುಗಮ ಪ್ರವೇಶಕ್ಕಾಗಿ ರ‍್ಯಾಂಪ್ (Ramp) ಸೌಲಭ್ಯವನ್ನೂ ಒದಗಿಸಲಾಗಿದೆ.

2. ಆರ್.ಟಿ. ರಸ್ತೆ (ಶ್ರೀನಿವಾಸ ಮಂದಿರ ರಸ್ತೆಯಿಂದ ಅವೆನ್ಯೂ ರಸ್ತೆವರೆಗೆ):

ಆರ್.ಟಿ. ರಸ್ತೆ (ಶ್ರೀನಿವಾಸ ಮಂದಿರ ರಸ್ತೆಯಿಂದ ಅವೆನ್ಯೂ ರಸ್ತೆವರೆಗೆ) ಯನ್ನು 2.52 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ, ವಾಣಿಜ್ಯ ಕೇಂದ್ರವಾಗಿರುವ ಈ ಪ್ರದೇಶದಲ್ಲಿ 645 ಮೀಟರ್ ಉದ್ದದ ರಸ್ತೆಗೆ 3 ಮೀಟರ್ ಅಗಲದ 150 ಎಂ.ಎಂ ದಪ್ಪದ ವೈಟ್ ಟಾಪಿಂಗ್ ಮಾಡಲಾಗಿದೆ. ರಸ್ತೆಯ ಅಂದವನ್ನು ಹೆಚ್ಚಿಸಲು ಬೂದು ಮತ್ತು ಕೆಂಪು ಬಣ್ಣದ ಜಿಗ್-ಜಾಗ್ ಪೇವರ್‌ಗಳೊಂದಿಗೆ ಬಫರ್ ವಲಯವನ್ನು ನಿರ್ಮಿಸಲಾಗಿದೆ.

ಬೆಂಗಳೂರು ಪೇಟೆಯಲ್ಲಿ ಪ್ರಥಮ – ವಿನೂತನ ‘ಫೈರ್ ಹೈಡ್ರೆಂಟ್’ ವ್ಯವಸ್ಥೆ:

ಆರ್.ಟಿ. ರಸ್ತೆಯ ಅತ್ಯಂತ ಪ್ರಮುಖ ಅಂಶವೆಂದರೆ, ಇಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ‘ಫೈರ್ ಹೈಡ್ರೆಂಟ್’ (Fire Hydrant) ಜಾಲ, ಐತಿಹಾಸಿಕ ‘ಬೆಂಗಳೂರು ಪೇಟೆ’ ಪ್ರದೇಶದ ರಸ್ತೆಗಳು ಅತ್ಯಂತ ಕಿರಿದಾಗಿದ್ದು, ತುರ್ತು ಸಂದರ್ಭಗಳಲ್ಲಿ ಅಗ್ನಿಶಾಮಕ ವಾಹನಗಳ ಪ್ರವೇಶಕ್ಕೆ ತೀವ್ರ ಅಡಚಣೆಯಾಗಿ ಅಪಾರ ಹಾನಿ ಸಂಭವಿಸಿದ ಉದಾಹರಣೆಗಳಿವೆ. ಈ ಸಮಸ್ಯೆಯನ್ನು ಬಗೆಹರಿಸಲು ಮತ್ತು ತಕ್ಷಣದ ತುರ್ತು ಸ್ಪಂದನೆಯನ್ನು ಖಚಿತಪಡಿಸಿಕೊಳ್ಳಲು ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಬೆಂಗಳೂರಿನ ರಸ್ತೆಗಳಲ್ಲಿ ಇಂತಹ ಜೀವ ರಕ್ಷಕ ಮೂಲಸೌಕರ್ಯವನ್ನು ಅಳವಡಿಸುತ್ತಿರುವುದು ಇದೇ ಮೊದಲು ಮತ್ತು ಇದೊಂದು ವಿನೂತನ ಪರಿಕಲ್ಪನೆಯಾಗಿದೆ.

ಈ ಎರಡೂ ರಸ್ತೆಗಳಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಪುರಾತನ ಶೈಲಿಯ (Antique finish) ಎಲ್‌.ಇ.ಡಿ ಬೀದಿ ದೀಪಗಳು ಮತ್ತು ಥರ್ಮೋಪ್ಲಾಸ್ಟಿಕ್ ರಸ್ತೆ ಗುರುತುಗಳನ್ನು (Road Marking) ಅಳವಡಿಸಲಾಗಿದ್ದು, ಸಾರ್ವಜನಿಕರಿಗೆ ಸುಗಮ ಸಂಚಾರ ಹಾಗೂ ಸುರಕ್ಷತೆಯನ್ನು ಒದಗಿಸಲಾಗಿದೆ.

ಈ ವೇಳೆ ಬೆಂಗಳೂರು ಅಭಿವೃದ್ದಿ ಸಚಿವರಾದ ಕೃಷ್ಣ ಭೈರೇಗೌಡ,
ವಿಶೇಷ ಆಯುಕ್ತರಾದ ನಿತೀಶ್, ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಜಗದೀಶ್, ಅಭಿವೃದ್ಧಿ ಅಪರ ಆಯುಕ್ತರಾದ ವೆಂಕಟಾಚಲಪತಿ, ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್, ಮಾದೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ