Tuesday, August 4, 2026
HomeUncategorizedಕಾಂಗ್ರೆಸ್ಸಿನ ಬೆಳವಣಿಗೆ- ಉಳಿದುದನ್ನು ಕಾದು ನೋಡೋಣ

ಕಾಂಗ್ರೆಸ್ಸಿನ ಬೆಳವಣಿಗೆ- ಉಳಿದುದನ್ನು ಕಾದು ನೋಡೋಣ

ಎಸ್.ಟಿ. ಸಮುದಾಯದ ಹಿತಾಸಕ್ತಿಗೆ ದ್ರೋಹ: ಸಿ.ಟಿ.ರವಿ

ಬೆಂಗಳೂರು: ಕಾಂಗ್ರೆಸ್ ಪಕ್ಷವು ತಾನು ಮಾಡಿದ ಸಾಂವಿಧಾನಿಕ ಅಪಚಾರಕ್ಕೆ ಸಾರ್ವಜನಿಕ ಕ್ಷಮೆಯಾಚನೆ ಮಾಡಲಿ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆಗ್ರಹಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸ್ಪೀಕರ್, ಉಪ ಸ್ಪೀಕರ್, ಮೇಲ್ಮನೆ ಸಭಾಧ್ಯಕ್ಷರು, ಉಪ ಸಭಾಧ್ಯಕ್ಷರ ಸಾಂವಿಧಾನಿಕ ಹುದ್ದೆಗಳಿಗೆ ಆದೇಶ ಮಾಡಿ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ಲೂಟಿಯ ಆರೋಪಪಟ್ಟಿಯನ್ನು ನಾಗೇಂದ್ರ ಮೇಲೆ ಹಾಕಿದ್ದಾರೆ. ಇ.ಡಿ. ಪ್ರತ್ಯೇಕ ಮೊಕದ್ದಮೆ ದಾಖಲಿಸಿ ಹಣ, ಒಡವೆ ಇತ್ಯಾದಿಯನ್ನು ವಶಕ್ಕೆ ಪಡೆದಿದೆ. ಇಷ್ಟಾದ ಮೇಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 187 ಕೋಟಿ ಲೂಟಿ ಹೊಡೆದಿಲ್ಲ; ಬರೀ 89 ಕೋಟಿ ಎಂದು ಸದನದಲ್ಲಿ ಹೇಳಿದ್ದರು ಎಂದು ಗಮನ ಸೆಳೆದರು.
ಚಾರ್ಜ್‍ಶೀಟ್ ಆದವರನ್ನು ಸಚಿವಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಇಡೀ ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರಕ್ಕೆ ಸಮರ್ಥನೆ ಕೊಟ್ಟಿದೆ. ಎಸ್.ಸಿ., ಎಸ್‍ಟಿ ಸಮುದಾಯಕ್ಕೆ ದ್ರೋಹ ಮಾಡಿದೆ. ಸಮುದಾಯದ ಹಣ ಲೂಟಿ ಹೊಡೆದವರನ್ನು ಮತ್ತೆ ಮಂತ್ರಿ ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ಸಮರ್ಥನೆ ಮಾತ್ರವಲ್ಲ; ಭ್ರಷ್ಟಾಚಾರಿಗಳ ಬೆಂಬಲಕ್ಕೆ ನಿಂತದ್ದು ಮಾತ್ರವಲ್ಲದೇ ಅದರ ಜೊತೆಗೇ ಎಸ್.ಟಿ. ಸಮುದಾಯದ ಹಿತಾಸಕ್ತಿಗೆ ದ್ರೋಹ ಬಗೆಯುವ ಕೆಲಸವನ್ನು ಮಾಡಿದೆ ಎಂದು ಟೀಕಿಸಿದರು.

ಬ್ಲ್ಯಾಕ್‍ಮೇಲ್ ಬೆದರಿಕೆಗೂ ಮಣಿದಿರುವ ಸಾಧ್ಯತೆ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ತೆಲಂಗಾಣ ಚುನಾವಣೆಗೆ ಮತ್ತು ಲೋಕಸಭಾ ಚುನಾವಣೆಗೆ ಬಳಕೆ ಆದುದನ್ನು ನಾವು ಮೊದಲೇ ಆರೋಪಿಸಿದ್ದೆವು. ಈಗ ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ಚಾರ್ಜ್‍ಶೀಟ್ ಹೊಂದಿದ ವ್ಯಕ್ತಿಗೆ ಮತ್ತೆ ಸಚಿವಸ್ಥಾನ ಕೊಡುವ ಮೂಲಕ ತಾನು ಭ್ರಷ್ಟಾಚಾರಿಗಳ ಪರ ಎಂದು ಸಾಬೀತುಪಡಿಸಿದೆ. ಇವರು ಬ್ಲ್ಯಾಕ್‍ಮೇಲ್ ಬೆದರಿಕೆಗೂ ಮಣಿದಿರುವ ಸಾಧ್ಯತೆ ಇದೆ ಎಂದು ಆರೋಪಿಸಿದರು.
ಶಿವಲಿಂಗೇಗೌಡರು ವಿಧಾನಸಭೆಯಲ್ಲಿ ತನ್ನ ಕೊಳಕು ಮಾತುಗಳ ಮೂಲಕ ತನ್ನ ನಿಜಸ್ವರೂಪ ಅನಾವರಣಗೊಳಿಸಿದ್ದರು. ಶಿಕ್ಷಣ ಕ್ಷೇತ್ರವನ್ನೇ ಕಂಗಾಲಾಗಿ ಮಾಡಿದ ಮಧು ಅವರೂ ಮತ್ತೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕಾರ್ಮಿಕ ಇಲಾಖೆಯ ಕಾರ್ಮಿಕರ ಕಿಟ್ ಹಗರಣಕ್ಕೂ ಬಹುಮಾನ ಸಿಕ್ಕಿದೆ ಎಂದು ವ್ಯಂಗ್ಯವಾಡಿದರು. ಬಿಡದಿ ಟೌನ್‍ಶಿಪ್ ಹಗರಣ ವಿರೋಧಿಸಿ ರೈತರು ಹೋರಾಟ ಮಾಡುತ್ತಿದ್ದಾರೆ. ಆ ಹಗರಣಕ್ಕೆ ಹೊಸ ಆಯಾಮ ಕೊಡುವುದಕ್ಕೂ ಮಂತ್ರಿಸ್ಥಾನ ಕೊಡಲಾಗಿದೆ ಎಂದು ಆರೋಪಿಸಿದರು.

ಅಪ್‍ನಾ ಕಾಂಗ್ರೆಸ್ ಕ್ಯಾಬಿನೆಟ್ ಮೇ ಲಡ್ಕೀ ಕಹಾಂ ಹೇ
ಮೈ ಲಡ್ಕೀ ಹೂಂ, ಮೈ ಲಡ್ ಸಕ್ ತೀ ಹೂಂ ಎಂದು ಪ್ರಿಯಾಂಕ ಗಾಂಧಿಯವರು ಉದ್ದುದ್ದ ಭಾಷಣ ಮಾಡಿದ್ದÀರು ಎಂದ ಅವರು, ಅಪ್‍ನಾ ಕಾಂಗ್ರೆಸ್ ಕ್ಯಾಬಿನೆಟ್ ಮೇ ಲಡ್ಕೀ ಕಹಾಂ ಹೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರ ಇಲ್ಲ; ಮಹಿಳಾ ಪ್ರಾತಿನಿಧ್ಯ ಇಲ್ಲ ಎಂದು ಟೀಕಿಸಿದರು. ಇವರು ಮಹಿಳಾ ವಿಧೇಯಕ ಮಾತ್ರ ವಿರೋಧಿಸಿಲ್ಲ; ಮಹಿಳೆಯರನ್ನು ಮಂತ್ರಿ ಮಾಡುವುದರಲ್ಲೂ ಸಣ್ಣತನ ತೋರಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಮಾರಂಭಕ್ಕೆ ಸಾಕ್ಷಿ ಆಗದೇ ಇರುವುದು, ಇವರಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶವನ್ನು ಹೊರಗಡೆ ರವಾನಿಸಿದೆ ಎಂದು ವಿಶ್ಲೇಷಿಸಿದರು.

ಉಳಿದ ಸಂಗತಿ ಕಾದು ನೋಡಬೇಕಿದೆ..
ಬೆಂಗಳೂರಿನಲ್ಲೇ ಮುಖ್ಯಮಂತ್ರಿ ಪೋಸ್ಟರ್‍ಗೆ ಅವರದೇ ಪಕ್ಷದ ಕಾರ್ಯಕರ್ತರು ಮಂತ್ರದ ಜೊತೆ ಪೂಜೆ ಮಾಡಿದ್ದು, ಇದು ಆರಂಭ ಮಾತ್ರ ಅನಿಸುತ್ತಿದೆ. ಉಳಿದ ಸಂಗತಿಯನ್ನು ಕಾದು ನೋಡಬೇಕಿದೆ

ಹೆಚ್ಚಿನ ಸುದ್ದಿ