ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಬೇಕಾದ ಮೊದಲ ದಿನವೇ ಪಕ್ಷೇತರರೂ ಸೇರಿ ಒಟ್ಟು 221 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಸಚಿವರಾದ ಎಸ್.ಟಿ.ಸೋಮಶೇಖರ್, ಮುರುಗೇಶ್ ಆರ್.ನಿರಾಣಿ, ಸಿ.ಸಿ.ಪಾಟೀಲ್, ಡಾ.ಕೆ.ಸುಧಾಕರ್, ವಿ.ಸುನೀಲ್ ಕುಮಾರ್, ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಶಿವಾನಂದ್ ಪಾಟೀಲ್ ಸೇರಿದಂತೆ ಒಟ್ಟು 221 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
197 ಮಂದಿ ಪುರುಷ ಹಾಗೂ 24 ಮಂದಿ ಮಹಿಳಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಬಿಜೆಪಿ 27, ಕಾಂಗ್ರೆಸ್ 26, ಎಎಪಿಯ10, ಜೆಡಿಎಸ್ ನ 12, ಬಿಎಸ್ಪಿಯ ಒಂದು ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದುವರೆಗೆ ಬಿಜೆಪಿ ಎರಡು ಕಂತುಗಳಲ್ಲಿ ಒಟ್ಟು 212 ಮಂದಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಎರಡು ಕಂತುಗಳಲ್ಲಿ ಒಟ್ಟು 166 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜೆಡಿಎಸ್ ಒಂದೇ ಕಂತಿನಲ್ಲಿ 93 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮೂರು ಪಕ್ಷಗಳು ತಮ್ಮ ಅಭ್ಯರ್ಥಿಗಳಿಗೆ ‘ಬಿ ಫಾರಂ’ ವಿತರಿಸುತ್ತಿದೆ.
ನಾಮಪತ್ರ ಸಲ್ಲಿಕೆಗೆ ಎ.20 ಕೊನೆಯ ದಿನವಾಗಿದ್ದು, ನಾಮಪತ್ರಗಳ ಪರಿಶೀಲನೆ ಕಾರ್ಯ ಎ.21ಕ್ಕೆ ರಂದು ನಡೆಯಲಿದೆ. ಹಿಂಪಡೆದುಕೊಳ್ಳಲು ಎ.24 ಕೊನೆಯ ದಿನವಾಗಿರಲಿದೆ.