ಆರು ದಿನಗಳ ಬಳಿಕ ಭಕ್ತರಿಗೆ ದರ್ಶನ ನೀಡಿದ ಕಂಗಳೇಶ್ವರ ಸ್ವಾಮಿ ಹಾಗೂ ವೀರಾಂಜನೇಯ ಸ್ವಾಮಿ
ಯಾದಗಿರಿ: ಮಹಾರಾಷ್ಟ್ರ ಸೇರಿದಂತೆ ಭೀಮಾ ನದಿ ಜಲಾನಯನ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬಂದ ಪರಿಣಾಮ, ಯಾದಗಿರಿ ನಗರದ ಹೊರವಲಯದಲ್ಲಿರುವ ಕಂಗಳೇಶ್ವರ ಸ್ವಾಮಿ ಹಾಗೂ ವೀರಾಂಜನೇಯ ಸ್ವಾಮಿ ದೇವಸ್ಥಾನಗಳು ಕಳೆದ ಆರು ದಿನಗಳಿಂದ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿದ್ದವು.
ಭೀಮಾ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ದೇವಸ್ಥಾನಗಳ ಸುತ್ತಮುತ್ತಲಿನ ಪ್ರದೇಶವೂ ಜಲಾವೃತಗೊಂಡಿತ್ತು. ಹೀಗಾಗಿ ಭಕ್ತರು ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ. ನದಿಯ ನೀರಿನ ಹರಿವು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರ ಸಂಚಾರಕ್ಕೂ ನಿರ್ಬಂಧಿಸಲಾಗಿತ್ತು.
ಇದೀಗ ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಭೀಮಾ ನದಿಗೆ ಹರಿದುಬರುತ್ತಿದ್ದ ನೀರಿನ ಪ್ರಮಾಣದಲ್ಲೂ ಇಳಿಕೆಯಾಗುತ್ತಿದೆ. ಪರಿಣಾಮವಾಗಿ ನದಿಯ ನೀರಿನ ಮಟ್ಟ ನಿಧಾನವಾಗಿ ಕಡಿಮೆಯಾಗುತ್ತಿದ್ದು, ನೀರಿನಲ್ಲಿ ಮುಳುಗಿದ್ದ ದೇವಸ್ಥಾನಗಳ ಗೋಪುರ ಹಾಗೂ ಕಟ್ಟಡಗಳು ಮತ್ತೆ ಗೋಚರಿಸಲು ಆರಂಭಿಸಿವೆ.
ಆರು ದಿನಗಳ ಬಳಿಕ ಕಂಗಳೇಶ್ವರ ಸ್ವಾಮಿ ಹಾಗೂ ವೀರಾಂಜನೇಯ ಸ್ವಾಮಿ ದೇವಸ್ಥಾನಗಳು ಭಕ್ತರಿಗೆ ದರ್ಶನ ನೀಡುತ್ತಿರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ. ನೀರಿನ ಮಟ್ಟ ಮತ್ತಷ್ಟು ಇಳಿಕೆಯಾದ ಬಳಿಕ ದೇವಸ್ಥಾನಗಳ ಸುತ್ತಮುತ್ತ ಸ್ವಚ್ಛತಾ ಕಾರ್ಯ ಕೈಗೊಂಡು ಎಂದಿನಂತೆ ಪೂಜಾ ಕಾರ್ಯಗಳು ನಡೆಯುವ ನಿರೀಕ್ಷೆಯಿದೆ.
ಭೀಮಾ ನದಿಯ ನೀರಿನ ಮಟ್ಟದಲ್ಲಿ ಇಳಿಕೆ ಕಂಡುಬಂದಿದ್ದರೂ, ನದಿ ಪಾತ್ರದ ಜನರು ಹಾಗೂ ಭಕ್ತರು ಇನ್ನೂ ಕೆಲ ದಿನಗಳ ಕಾಲ ಎಚ್ಚರಿಕೆಯಿಂದ ಇರುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
