Friday, August 14, 2026
Homeರಾಜ್ಯಪಿಂಚಣಿ ಹಾಗೂ ವಾರ್ಷಿಕ ಆದಾಯ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ..!!!

ಪಿಂಚಣಿ ಹಾಗೂ ವಾರ್ಷಿಕ ಆದಾಯ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ..!!!

ಮುದ್ದೇಬಿಹಾಳ: ಸಾಮಾಜಿಕ ಭದ್ರತಾ ಯೋಜನೆಗಳಡಿ ನೀಡಲಾಗುತ್ತಿರುವ ಪಿಂಚಣಿ ಮೊತ್ತ ಹೆಚ್ಚಿಸುವುದು ಹಾಗೂ ಫಲಾನುಭವಿಗಳ ಕುಟುಂಬದ ವಾರ್ಷಿಕ ಆದಾಯ ಮಿತಿಯನ್ನು ಹೆಚ್ಚಿಸುವಂತೆ ಆಗ್ರಹಿಸಿ ಎಂ.ಆರ್.ಡಬ್ಲ್ಯೂ., ವಿ.ಆರ್.ಡಬ್ಲ್ಯೂ., ಯು.ಆರ್.ಡಬ್ಲ್ಯೂ. ಹಾಗೂ ಕಾರ್ಯಕರ್ತರ ರಾಜ್ಯ ಒಕ್ಕೂಟದ ತಾಲೂಕು ಘಟಕದ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಅಂಬೇಡ್ಕರ್ ವೃತ್ತ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ತಲುಪಿತು. ಬಳಿಕ ಪ್ರತಿಭಟನಾಕಾರರು ತಮ್ಮ ವಿವಿಧ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಎಂ.ಆರ್.ಡಬ್ಲ್ಯೂ. ಎಸ್.ಕೆ. ಘಟಗೆ, ವಿಕಲಚೇತನರು, ವಯೋವೃದ್ಧರು ಹಾಗೂ ವಿಧವಾ ಪಿಂಚಣಿದಾರರಿಗೆ ಕಳೆದ ನಾಲ್ಕು ತಿಂಗಳಿಂದ ಮಾಸಾಶನ ದೊರೆಯುತ್ತಿಲ್ಲ. ಸರ್ಕಾರ ನಿಗದಿಪಡಿಸಿರುವ ಕುಟುಂಬದ ವಾರ್ಷಿಕ ಆದಾಯ ಮಿತಿ ₹32,000 ಆಗಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಇದು ಅವೈಜ್ಞಾನಿಕವಾಗಿದೆ. ಆದಾಯ ಮಿತಿಯನ್ನು ಹೆಚ್ಚಿಸುವ ಮೂಲಕ ಹೆಚ್ಚಿನ ಅರ್ಹ ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಬೆಲೆ ಏರಿಕೆಯಿಂದಾಗಿ ಪ್ರಸ್ತುತ ನೀಡುತ್ತಿರುವ ಪಿಂಚಣಿ ಮೊತ್ತವು ಫಲಾನುಭವಿಗಳ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಹೀಗಾಗಿ ಪಿಂಚಣಿ ಮೊತ್ತವನ್ನು ಕೂಡಲೇ ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಶೇ.40ರಷ್ಟು ಅಂಗವಿಕಲತೆ ಹೊಂದಿರುವವರಿಗೆ ₹3,000 ಹಾಗೂ ಹೆಚ್ಚಿನ ಅಂಗವಿಕಲತೆ ಹೊಂದಿರುವವರಿಗೆ ₹5,000 ಮಾಸಿಕ ಪಿಂಚಣಿ ನೀಡಬೇಕು. ವಯೋವೃದ್ಧರು, ವಿಧವೆಯರು ಹಾಗೂ ಮನಸ್ವಿನಿ ಯೋಜನೆಯ ಫಲಾನುಭವಿಗಳಿಗೆ ಮಾಸಿಕ ₹3,000 ಪಿಂಚಣಿ ನೀಡಬೇಕು. ಅರ್ಹ ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ ಸಮರ್ಪಕವಾಗಿ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಉಮೇಶ ಜತ್ತಿ, ನಾಗೇಶ ಅಮರಾವತಿ, ಸುನೀಲ ಪಾಟೀಲ, ನಾಗೇಶ ಟಿ., ಶ್ರೀಶೈಲ ಇನಾಮದಾರ, ವಿಠ್ಠಲ ಜಾಧವ, ಅಡಿವೆಪ್ಪ ಕೊಡಗಾನೂರ, ಯಲ್ಲಪ್ಪ ಮಾದರ, ಸಂಗೀತಾ ಕೋಳೂರ, ಸಂಗನಗೌಡ ಬಗಲಿ, ಈರಣ್ಣ ತಾರನಾಳ, ಬಸವರಾಜ ನಾಯ್ಕೋಡಿ, ಪವಡೆಪ್ಪ ಚಲವಾದಿ, ಮಂಜುನಾಥ ಬಿರಾದಾರ, ಸಂಗಮ್ಮ ಜಂಬಗಿ, ಮಹಾದೇವ ಮದೀನಾಳ ಸೇರಿದಂತೆ ನೂರಾರು ವಿಕಲಚೇತನರು ಹಾಗೂ ವಯೋವೃದ್ಧರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಹೆಚ್ಚಿನ ಸುದ್ದಿ