ನಂದಿನಿ ಉತ್ಪನ್ನಗಳ ಮೇಲೆ ಹಿಂದಿ ಪದಗಳನ್ನು ಮುದ್ರಿಸಲು ಪ್ರಾರಂಭಿಸಿರುವ ಕೇಂದ್ರದ ಕ್ರಮಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಎಚ್.ಡಿ.ಕುಮಾರಸ್ವಾಮಿ, ನಂದಿನಿ ಸಂಸ್ಥೆ ಕನ್ನಡಿಗರ ಜೀವನಾಡಿಯಾಗಿದ್ದು, ಇದರ ಮೇಲೆ ಹಿಂದಿ ಹೇರಿಕೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಭಾರತೀಯ ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರವು ನಂದಿನಿ ಸೇರಿದಂತೆ ಹಲವು ಸಂಸ್ಥೆಗಳಿಗೆ ಈ ಕುರಿತು ಪತ್ರಮುಖೇನ ಕಡ್ಡಾಯ ಆದೇಶ ನೀಡಿತ್ತು. ಆದೇಶದ ಪ್ರಕಾರ ನಂದಿನಿ ಪ್ರೋ ಬಯೋಟಿಕ್ ಮೊಸರಿನ ಪೊಟ್ಟಣದ ಮೇಲೆ ಇಂಗ್ಲಿಷ್‍ನಲ್ಲಿ ಕರ್ಡ್ ಎಂದು ಮುದ್ರಿಸಿ ಆವರಣದಲ್ಲಿ “ದಹಿ” (ಹಿಂದಿ ಭಾಷೆಯಲ್ಲಿ ಮೊಸರು) ಎಂದು ಮುದ್ರಿಸಲಾಗಿತ್ತು. ಕೇಂದ್ರದ ಈ ಕ್ರಮದ ಬಗ್ಗೆ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗಿತ್ತು.
ತಮಿಳುನಾಡಿನ ಸ್ಥಳೀಯ ಹಾಲು ಉತ್ಪಾದಕ ಸಂಸ್ಥೆಗಳ ಮೇಲೆ ಹಿಂದಿ ಹೇರಿಕೆಯ ವಿರುದ್ಧ ಬಿಜೆಪಿ ಮುಖಂಡ ಅಣ್ಣಾಮಲೈ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಹಲವು ಕನ್ನಡ ಪರ ಸಂಘಟನೆಗಳು ನಂದಿನಿ ನಿರ್ದೇಶಕರನ್ನು ಭೇಟಿ ಮಾಡಿ ಹಿಂದಿ ಹೇರಿಕೆ ನಿಲ್ಲಿಸುವಂತೆ ಒತ್ತಾಯಿಸಿತ್ತು.

