Monday, March 2, 2026
Homeಟಾಪ್ ನ್ಯೂಸ್ಗಾಂಧಿ, ಹಿಂದೂ–ಮುಸ್ಲಿಂ, ಆರ್‌ಎಸ್‌ಎಸ್ ಅಂಶಗಳ ಕೈಬಿಟ್ಟ ಎನ್‌ಸಿಇಆರ್‌ಟಿ

ಗಾಂಧಿ, ಹಿಂದೂ–ಮುಸ್ಲಿಂ, ಆರ್‌ಎಸ್‌ಎಸ್ ಅಂಶಗಳ ಕೈಬಿಟ್ಟ ಎನ್‌ಸಿಇಆರ್‌ಟಿ

ನವದೆಹಲಿ: ನೂತನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿ, 12ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕದಿಂದ ಮಹಾತ್ಮ ಗಾಂಧಿ, ಹಿಂದೂ–ಮುಸ್ಲಿಂ ಏಕತೆ, ಆರ್‌ಎಸ್‌ಎಸ್ ನಿಷೇಧ ಸೇರಿದಂತೆ ಹಲವು ವಿಷಯಗಳ ಕುರಿತ ಭಾಗಗಳನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಕೈಬಿಟ್ಟಿದೆ.

‘ಗಾಂಧಿ ಅವರ ಹತ್ಯೆಯು ದೇಶದ ಕೋಮು ಸಾಮರಸ್ಯದ ಮೇಲೆ ಅಗಾಧ ಪರಿಣಾಮ ಬೀರಿತ್ತು’, ‘ಗಾಂಧೀಜಿ ಪ್ರತಿಪಾದಿಸಿದ ಹಿಂದೂ–ಮುಸ್ಲಿಂ ಏಕತೆಯು ಹಿಂದೂ ತೀವ್ರವಾದಿಗಳನ್ನು ಕೆರಳಿಸಿತ್ತು’, ಮತ್ತು ‘ಆರ್‌ಎಸ್‌ಎಸ್‌ನಂತಹ ಕೆಲ ಸಂಘಟನೆಗಳನ್ನು ಕೆಲ ಕಾಲ ನಿಷೇಧಿಸಲಾಗಿತ್ತು’ – ಇವು ಕೈಬಿಡಲಾಗಿರುವ ಕೆಲವು ಭಾಗಗಳಾಗಿವೆ.

ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಕಾಂಗ್ರೆಸ್ ಸಹಿತ ಕೆಲವು ಪಕ್ಷಗಳ ಮುಖಂಡರು ಎನ್‌ಸಿಇಆರ್‌ಟಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇನ್ನೊಂದೆಡೆ, ಬಿಜೆಪಿ ನಾಯಕರು ಮಂಡಳಿಯ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

‘12ನೇ ತರಗತಿಯ ಪಠ್ಯಕ್ರಮವನ್ನು ಕಡಿತಗೊಳಿಸಲಾಗಿಲ್ಲ. ಪಠ್ಯಕ್ರಮವನ್ನು ಕಳೆದ ವರ್ಷ ಜೂನ್‌ನಲ್ಲಿ ಸಂಕ್ಷೇಪಗೊಳಿಸಲಾಗಿದೆ’ ಎಂದು ಎನ್‌ಸಿಇಆರ್‌ಟಿ ಸಮಜಾಯಿಷಿ ನೀಡಿದೆ.

‘ಗುಜರಾತ್ ಗಲಭೆ, ಮೊಘಲರ ನ್ಯಾಯ ನಿರ್ಣಯ, ತುರ್ತು ಪರಿಸ್ಥಿತಿ, ಶೀತಲ ಸಮರ, ನಕ್ಸಲರ ಚಳವಳಿಗೆ ಸಂಬAಧಿಸಿದ ಪಾಠಗಳಲ್ಲಿ ಕೆಲ ವಿಷಯಗಳು ಪುನರಾವರ್ತನೆ ಹಾಗೂ ಅಪ್ರಸ್ತುತವಾಗಿದ್ದವು ಎಂಬ ಕಾರಣಕ್ಕೆ ಹಲವು ಅಂಶಗಳನ್ನು ಕೈಬಿಡುವ ಮೂಲಕ ಪಠ್ಯಕ್ರಮವನ್ನು ಸಂಕ್ಷೇಪಗೊಳಿಸುವ ಕಾರ್ಯ ಮಾಡಲಾಗಿದೆ’ ಎಂದು ಎನ್‌ಸಿಇಆರ್‌ಟಿ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

‘ಈ ಸಂಕ್ಷೇಪಗೊಳಿಸುವ ಕಾರ್ಯ ಕಳೆದ ವರ್ಷವೇ ನಡೆದಿದೆ. ಈ ವರ್ಷ ಯಾವುದೇ ಇಂಥ ಕ್ರಮ ಕೈಗೊಂಡಿಲ್ಲ’ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಸಕ್ಲಾನಿ ಹೇಳಿದ್ದಾರೆ.

ಪ್ರತೀಕಾರದ ಕ್ರಮ: ಕಾಂಗ್ರೆಸ್

ಎನ್‌ಸಿಇಆರ್‌ಟಿ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ‘ಕೇಂದ್ರ ಸರ್ಕಾರವು ಪ್ರತೀಕಾರವಾಗಿ ಇಂಥ ಕ್ರಮ ಕೈಗೊಂಡಿದೆ. ಆ ಮೂಲಕ ತಿಪ್ಪೆ ಸಾರಿಸುವ ಕಾರ್ಯಕ್ಕೆ ಮುಂದಾಗಿದೆ’ ಎಂದು ಹೇಳಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಪಠ್ಯದಲ್ಲಿ ಕೆಲ ಅಂಶಗಳನ್ನು ಕೈಬಿಟ್ಟಿರುವ ಕುರಿತ ವರದಿಗಳನ್ನು ತಮ್ಮ ಟ್ವೀಟ್‌ನೊಂದಿಗೆ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸುದ್ದಿ