ವಾಷಿಂಗ್ಟನ್: ಟ್ವಿಟರ್ ಸಂಸ್ಥೆಯಿಂದ ವಜಾಗೊಂಡಿದ್ದ ಮೂವರು ಉನ್ನತ ಅಧಿಕಾರಿಗಳು ತಾವು ಭರಿಸಿರುವ ಕಾನೂನು ವೆಚ್ಚಗಳನ್ನು ಮರುಪಾವತಿಸುವಂತೆ ಇಲಾನ್ ಮಸ್ಕ್ ವಿರುದ್ಧ ದಾವೆ ಹೂಡಿದ್ದಾರೆ.
ಟ್ವಿಟರ್ ಮಾಜಿ ಸಿಇಒ ಪರಾಗ್ ಅಗರವಾಲ್, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಮತ್ತು ಮುಖ್ಯ ಕಾನೂನು ಸಲಹೆಗಾರ ವಿಜಯ್ ಗಡ್ಡೆ ದಾವೆ ಹೂಡಿದ್ದಾರೆ. ದೈತ್ಯ ಮೈಕ್ರೋಬ್ಲಾಗಿಂಗ್ ವೇದಿಕೆಯಾದ ಟ್ವಿಟರ್‌ಅನ್ನು ಇಲಾನ್ ಮಸ್ಕ್ ಖರೀದಿಸಿದ ಬಳಿಕ ಹಲವು ಉನ್ನತ ಅಧಿಕಾರಿಗಳನ್ನು ಕೆಲಸದಿಂದ ಕಿತ್ತು ಹಾಕಿದ್ದರು. ಇಲಾನ್ ಮಸ್ಕ್ ಸಂಸ್ಥೆಯ ನಿಯಮಗಳ ಪ್ರಕಾರ ನಡೆದುಕೊಂಡಿಲ್ಲ ಎಂದು ಈ ಮೂವರು ಕಾನೂನು ಹೋರಾಟ ನಡೆಸಿದ್ದರು. ಈ ವೆಚ್ಚವನ್ನು ಇಲಾನ್ ಭರಿಸಬೇಕು ಎಂದು ದಾವೆ ಹೂಡಿದ್ದಾರೆ.
ಸಂಸ್ಥೆ ತಮಗೆ 1 ಮಿಲಿಯನ್ ಡಾಲಗಿಂತಲೂ ಹೆಚ್ಚು ಹಣವನ್ನು ಕಾನೂನುಬದ್ಧವಾಗಿ ಪಾವತಿಸಬೇಕಾಗಿದೆ ಎಂದು ಮಾಜಿ ಸಿಇಒ ಪರಾಗ್ ಅಗರವಾಲ್, ನೆಡ್ ಸೆಗಲ್, ವಿಜಯ್ ಗಡ್ಡೆ ತಮ್ಮ ದಾವೆಯಲ್ಲಿ ಉಲ್ಲೇಖಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಸಲ್ಲಿಸುವಂತೆ ಸೆಕ್ಯುರಿಟೀಸ್ & ಎಕ್ಸ್‌ಚೇಂಜ್ ಕಮಿಷನ್ (SEC) ಮತ್ತು ಡಿಪಾರ್ಟ್‌ಮೆಂಟ್ ಆಫ್ ಜಸ್ಟಿಸ್ (DOJ)ಗೆ ನ್ಯಾಯಾಲಯ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
