ಹುಬ್ಬಳ್ಳಿ : ಜಗದೀಶ್ ಶೆಟ್ಟರ್ ಅವರಿಗೆ ಈ ಬಾರಿ ಟಿಕೆಟ್ ನೀಡಲು ನಿರಾಕರಿಸಿರುವ ಬಿಜೆಪಿ ವರಿಷ್ಠರ ವಿರುದ್ಧ ಬೆಂಬಲಿಗರು ಬೀದಿಗಳಿದು ಪ್ರತಿಭಟನೆ ನಡೆಸಲು ಪ್ರಾರಂಭಿಸಿದ್ದಾರೆ. ಜಗದೀಶ್ ಶೆಟ್ಟರ್ ಅವರ ಭಾವಚಿತ್ರ ಹಿಡಿದು ಬೇಕೇ ಬೇಕು ನ್ಯಾಯ ಬೇಕು ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಸಿಗಬೇಕು ಎಂದು ಘೋಷಣೆ ಕೂಗಿದ್ದಾರೆ.
ಹೈಕಮ್ಯಾಂಡ್ ನಿರ್ಧಾರದ ವಿರುದ್ಧ ನೇರವಾಗಿ ಅಸಮಾಧಾನ ತೋಡಿಕೊಂಡಿದ್ದ ಜಗದೀಶ್ ಶೆಟ್ಟರ್, ಬಿಜೆಪಿ ಅವಕಾಶ ಕೊಡಲಿ ಬಿಡಲಿ, ನಾನು ಸ್ಪರ್ಧಿಸುವುದಂತೂ ನಿಶ್ಚಿತ ಎಂದು ಬಂಡಾಯದ ಬಾವುಟ ಹಾರಿಸಿದ್ದರು. ಮಂಗಳವಾರ ಸಂಜೆ ಶೆಟ್ಟರ್ ಅವರ ನಿವಾಸದಲ್ಲಿ ಬೆಂಬಲಿಗರ ಸಭೆ ಆಯೋಜಿಸಿ ಚರ್ಚೆ ನಡೆಸಲಾಯಿತು. ಬಳಿಕ ಕ್ಷೇತ್ರದಲ್ಲಿ ಬೆಂಬಲಿಗರು ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ಇದೇ ವೇಳೆ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಶೆಟ್ಟರ್ ಅವರ ಪರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ಅಂಥಾ ಒಳ್ಳೆಯ ನಾಯಕರಿಗೆ ಟಿಕೆಟ್ ಸಿಗದಿರುವುದು ಆಶ್ಚರ್ಯ ತರಿಸಿದೆ ಎಂದಿದ್ದಾರೆ. ಜೊತೆಗೆ ಬಿಜೆಪಿ ಹೈಕಮ್ಯಾಂಡ್ ಶೆಟ್ಟರ್ ಅವರ ಹಿರಿತನವನ್ನು ಪರಿಗಣಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.
