ತುಮಕೂರು: ಬಿಜೆಪಿ ಟಿಕೆಟ್ ನೀಡಲ್ಲವೆಂದು ಬೇಸರ ವ್ಯಕ್ತಪಡಿಸಿ ಮಾಜಿ ಸಚಿವ ಸೊಗಡು ಶಿವಣ್ಣ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ತುಮಕೂರು ನಗರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಸೊಗಡು ಶಿವಣ್ಣ ಟಿಕೆಟ್ ಕೈತಪ್ಪಿದ ಬಳಿಕ ನಗರದ ಮಾಕಂ ಹಾಲ್ ನಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದರು. ಬಳಿಕ ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಆಶಯವನ್ನೂ ಸಹ ವ್ಯಕ್ತಪಡಿಸಿದ್ದಾರೆ.
ಸೊಗಡು ಶಿವಣ್ಣನವರ ಕೈ ತಪ್ಪಿದ ಅವಕಾಸ ಸಂಸದ ಬಸವರಾಜು ಪುತ್ರ ಹಾಲಿಶಾಸಕ ಜ್ಯೋತಿಗಣೇಶ್ ಅವರಿಗೆ ಸಿಕ್ಕಿದೆ.
ಸಭೆಯಲ್ಲಿ ಬಿಜೆಪಿಗೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡ ಬಳಿಕ, ಇ-ಮೇಲ್ ಮೂಲಕ ಪಕ್ಷಕ್ಕೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ನಾಲ್ಕು ದಶಕಗಳಿಂದ ನಾವು ಕಷ್ಟಪಟ್ಟು ಕಟ್ಟಿದ ಪಕ್ಷದಲ್ಲಿ ಯಾರೋ ಬಂದು ಅಧಿಕಾರ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸೊಗಡು ಶಿವಣ್ಣ ಬಿಜೆಪಿ ನನಗೆ ನಂಬಿಕೆ ದ್ರೋಹ ಮಾಡಿದೆ ಎಂದು ಆರೋಪಿಸಿದರು. ಜೊತೆಗೆ ಬಿಜೆಪಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ತನ್ನ ಕಚೇರಿಯಿಂದ ಹೊರಗೆಸೆಯುತ್ತೇನೆ ಎಂದ ಸೊಗಡು ಶಿವಣ್ಣ, ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಶಿವಣ್ಣ ಜೋಳಿಗೆ ಹಿಡಿದು ಮನೆಮನೆಯಲ್ಲಿ ಭಿಕ್ಷೆ ಬೇಡಿಯಾದರೂ ಬಿಜೆಪಿ ವಿರುದ್ಧ ಸ್ಪರ್ಧಿಸುತ್ತೇನೆ ಎಂದಿದ್ದಾರೆ.
ಆರ್‌ಎಸ್‌ಎಸ್ ಮೂಲದ ಸೊಗಡು ಶಿವಣ್ಣ ತಮ್ಮ ಹಿಂದಿನ ದಿನಗಳಲ್ಲಿ ಜೋಳಿಗೆ ಹಿಡಿದು ವೋಟು ಕೊಡಿ, ನೋಟು ಕೊಡಿ ಎಂದು ಮತಯಾಚನೆ ಮಾಡಿದ್ದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲುವಾಸವನ್ನೂ ಅನುಭವಿಸಿದ್ದರು.
