ಬೆಂಗಳೂರು: ಬಹು ನಿರೀಕ್ಷಿತ ಕಾಂಗ್ರೆಸ್ ಮೂರನೇ ಪಟ್ಟಿ ಶುಕ್ರವಾರ ಬಿಡುಗಡೆಯಾಗುವ ಸಾಧ್ಯತೆಯಿದೆ. ಗುರುವಾರ ರಾತ್ರಿ ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ ನಡೆದಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರು ನೆರೆದಿದ್ದ ಈ ಸಭೆಯಲ್ಲಿ ಮೂರನೇ ಪಟ್ಟಿಯ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಅಂತಿಮಗೊಂಡಿದೆ. ಇದುವರೆಗೂ ಕಾಂಗ್ರೆಸ್ ಎರಡು ಹಂತಗಳಲ್ಲಿ ಪಟ್ಟಿ 166 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ತೀರಾ ಸೂಕ್ಷ್ಮವಾದ , ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿರುವ ಹಾಗೂ ಜಾತಿ ಸಮೀಕರಣದ ಒತ್ತಡವಿರುವ ಕ್ಷೇತ್ರಗಳನ್ನು ಮಾತ್ರ ಉಳಿಸಿಕೊಂಡಿದೆ. ಉಳಿದ 58 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಒಂದೇ ಹಂತದಲ್ಲಿ ಅಂತಿಮಗೊಳಿಸುವ ನಿರೀಕ್ಷೆಯಿದೆ.
ಪದ್ಮನಾಭನಗರ, ಚಿಕ್ಕಪೇಟೆ ಸೇರಿದಂತೆ ಹಲವೆಡೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ತಂತ್ರಗಾರಿಕೆ ಹೆಣೆದಿದೆ. ಜೊತೆಗೆ ಪಕ್ಷದಲ್ಲೂ ಸಹಾ ಜಾತಿ ಸಮೀಕರಣದ ಒತ್ತಡಗಳು ಹೆಚ್ಚುತ್ತಿದ್ದು ಲಿಂಗಾಯಿತ ಸಮುದಾಯಕ್ಕೆ ಮೂರನೇ ಪಟ್ಟಿಯಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕೆಂಬ ಕೂಗೂ ಸಹ ಕೇಳಿಬಂದಿದೆ.
