ಬೆಂಗಳೂರು: ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಕಳೆದ ಮೂರು ತಿಂಗಳಲ್ಲಿ ಬರೋಬ್ಬರಿ 205 ಮಂದಿ ಬೆಂಗಳೂರು ನಗರವೊಂದರಲ್ಲೇ ರಸ್ತೆ ಅಪಘಾತದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಬೆಂಗಳೂರು ನಗರ ಸಂಚಾರಿ ಪೊಲೀಸರ ಅಂಕಿಅಂಶಗಳ ಪ್ರಕಾರ, 2023ರ ಆರಂಭದಿಂದ ಮಾರ್ಚ್ ಅಂತ್ಯದವರೆಗೂ ಬೆಂಗಳೂರಿನಲ್ಲಿ ಒಟ್ಟು 1,197 ರಸ್ತೆ ಅಪಘಾತಗಳು ಸಂಭವಿಸಿವೆ. ಕಳೆದ ಮೂರು ತಿಂಗಳಲ್ಲಿ 1,051 ಮಂದಿ ರಸ್ತೆ ಅಪಘಾತದಿಂದಾಗಿ ಗಾಯಗೊಂಡಿದ್ದಾರೆ. 300 ಮಾರಣಾಂತಿಕ ಹಾಗೂ 997 ಮಾರಣಾಂತಿಕವಲ್ಲದ ರಸ್ತೆ ಅಪಘಾತಗಳು ಸಂಭವಿಸಿವೆ.
ಅಲ್ಲದೆ ಬೆಂಗಳೂರಿನಲ್ಲಿ ಇರುವ ಕೆಟ್ಟ ರಸ್ತೆಗಳು, ಅತಿ ವೇಗದ ಚಾಲನೆ, ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವುದೇ ಈ ಅಪಘಾತಗಳಿಗೆ ಕಾರಣ ಎಂದು ವಾಹನ ಸವಾರರು ಕಿಡಿಕಾರಿದ್ದಾರೆ. ಮತ್ತೊಂದೆಡೆ ಬೆಂಗಳೂರು ಮಹಾ ನಗರ ಸಂಚಾರಿ ಪೊಲೀಸರ ಬಳಿ ಇರುವ ದಾಖಲೆಗಳ ಪ್ರಕಾರ, ಬೆಂಗಳೂರಿನಲ್ಲಿ ನಿರ್ಲಕ್ಷ್ಯದ ವಾಹನ ಚಾಲನೆ ಸಂಬಂಧ ಕಳೆದ ಮೂರು ತಿಂಗಳಲ್ಲಿ 660 ಪ್ರಕರಣಗಳು ದಾಖಲಾಗಿವೆ.
ಅತಿ ವೇಗದ ವಾಹನ ಚಾಲನೆ ಸಂಬಂಧ 917 ಪ್ರಕರಣಗಳು ದಾಖಲಾಗಿವೆ. ಇನ್ನು ಸಿಗ್ನಲ್ ಜಂಪ್, ಲೇನ್ ಶಿಸ್ತು ಉಲ್ಲಂಘನೆ ಸಂಬಂಧ 2,32,626 ಪ್ರಕರಣಗಳು ದಾಖಲಾಗಿವೆ.
