ಬೆಳಗಾವಿ: ಜಗದೀಶ್ ಶೆಟ್ಟರ್ ಏನು ತಪ್ಪು ಮಾಡಿದ್ದಾರೆ. ಯಾಕೆ ಅವರಿಗೆ ಟಿಕೆಟ್ ಕೊಡುತ್ತಿಲ್ಲ ಎಂದು ಜಗದೀಶ್ ಶೆಟ್ಟರ್ ಪರ ಲಕ್ಷ್ಮಣ ಸವದಿ ಬ್ಯಾಟಿಂಗ್ ಮಾಡಿದ್ದಾರೆ.
ಟಿಕೆಟ್ ಸಿಗದ ವಿಚಾರವಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವ ಲಕ್ಷ್ಮಣ್ ಸವದಿ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಗದೀಶ್ ಶೆಟ್ಟರ್ ಅವರ ತಂದೆ ಕಾಲದಿಂದಲೂ ಸಂಘ ಪರಿವಾರದಲ್ಲಿ ಇದ್ದಾರೆ. ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದ್ದಾರೆ. ಯಾಕೆ ಅವರಿಗೆ ಟಿಕೆಟ್ ಕೊಡುತ್ತಿಲ್ಲ. ಅವರು ಏನು ತಪ್ಪು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದು ಶೆಟ್ಟರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನ. ಅಭಿಮಾನಿಗಳ ಸಭೆಯ ಬಳಿಕ ಶೆಟ್ಟರ್ ತಮ್ಮ ನಿರ್ಧಾರ ಪ್ರಕಟ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಲಕ್ಷ್ಮಣ ಸವದಿ ದುಡುಕಿ ಪಕ್ಷ ತೊರೆದರು ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಉತ್ತರಿಸಿದ ಸವದಿ, ಪಕ್ಷ ತೊರೆಯುವ ನಿರ್ಧಾರವನ್ನು ನಾನು ದುಡುಕಿ ತೆಗೆದುಕೊಂಡಿಲ್ಲ. ಪಕ್ಷ ಟಿಕೆಟ್ ನೀಡುವಲ್ಲಿ ತಪ್ಪು ಮಾಡಿದೆ ಎಂದು ಹೇಳಿದ್ದಾರೆ. ತತ್ವ ಮತ್ತು ಸಿದ್ದಾಂತವನ್ನು ಬಿಜೆಪಿ ಗಾಳಿಗೆ ತೂರಿದೆ ಎಂದು ಕಿಡಿಕಾರಿದ್ದಾರೆ.
