ಬೆಂಗಳೂರು: ಮತದಾರರ ಗುರುತಿನ ಚೀಟಿ ಅಕ್ರಮದಲ್ಲಿ ಪ್ರಸಿದ್ಧ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ ಹೆಸರು ಕೇಳಿಬಂದಿದೆ. ಮತದಾರರ ಗುರುತಿನ ಚೀಟಿಯನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದ ಚಿಲುಮೆ ಸಂಸ್ಥೆಯೊಡನೆ ಹೊಂಬಾಳೆ ಫಿಲ್ಮ್ಸ್ ಮತ್ತು ರಾಜ್ ಧರ್ಮ ಅನಾಲಿಟಿಕಾ ಸಂಸ್ಥೆ ಸಂಬಂಧ ಹೊಂದಿರುವುದು ತನಿಖೆಯಲ್ಲಿ ಬಯಲಾಗಿದೆ.
ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ್ ಅವರಿಗೆ ಸಂಬಂಧಿಸಿದ ಎರಡು ಸಂಸ್ಥೆಗಳೂ ಸಹ ಚಿಲುಮೆ ಗ್ರೂಪ್ ಸಂಪರ್ಕದಲ್ಲಿರುವುದು ತಿಳಿದು ಬಂದಿದ್ದು, ಸಚಿವರ ಸೋದರ ಸಂಬಂಧಿ ಹೊಂಬಾಳೆ ಫಿಲ್ಮ್ಸ್ ಮಾಲಿಕ ವಿಜಯ್ ಕಿರಗಂದೂರು ಅವರು ಹೊಂಬಾಳೆ ಲೇಬಲ್ ಅಡಿಯಲ್ಲಿ ಪಡೆದ ಸಾಲಕ್ಕೆ ಬ್ಯಾಂಕ್ ಗ್ಯಾರೆಂಟರ್ ಆಗಿರುವುದು ದಾಖಲೆಗಳಲ್ಲಿ ನಮೂದಾಗಿದೆ.
ಪ್ರಕರಣದ ಮತ್ತೊಂದು ಆಘಾತಕಾರಿ ಅಂಶವೆಂದರೆ ಕೋಟ್ಯಾಂತರ ಜನರ ಮತದಾರರ ದತ್ತಾಂಶವನ್ನು ವಿದೇಶಿ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗಿದ್ದು, ಇದು ಯಾವ ಸಮಯದಲ್ಲಾದರೂ ದುರುಪಯೋಗವಾಗುವ ಸಾಧ್ಯತೆಯಿದೆ. ಇದನ್ನು ಆದಷ್ಟೂ ಬೇಗ ಹಿಂಪಡೆಯುವಂತೆ ವರದಿ ಶಿಫಾರಸು ಮಾಡಿದೆ.