
ವರದಿ: ಯಮನೂರಪ್ಪ ಆರ್ ಅಬ್ಬಿಗೇರಿ
ರಾಯಚೂರು ಜೂನ್ 5 ಜನರಿಗೆ ಅತ್ಯುಪಯುಕ್ತವಾದ
ನರೇಗಾ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತು ಕೊಡಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿ, ಕಾರ್ಯನಿರ್ವಹಣೆಯಲ್ಲಿ ವಿಫಲರಾದಲ್ಲಿ ಅಂತವರ ವಿರುದ್ಧ ತಾಲ್ಲೂಕು ಅಡ್-ಹಾಕ್ ಸಮಿತಿಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಅವರು ಹೇಳಿದರು.
ರಾಯಚೂರು ಜಿಲ್ಲಾ ಪಂಚಾಯತ್ ಕಚೇರಿಯ ಸಭಾ ಭವನದಲ್ಲಿ ಜೂನ್ 04ರಂದು ನಡೆದ ನರೇಗಾ ಯೋಜನೆಯ ಅಡ್-ಹಾಕ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ತಾಲ್ಲೂಕಿನಲ್ಲಿ ಅಡ್ ಹಾಕ್ ಸಮಿತಿಯ ಸದಸ್ಯರೊಂದಿಗೆ ಚರ್ಚಿಸಿ ಪ್ರಕರಣಗಳನ್ನು ಯಾವ ರೀತಿ ತಿರುವಳಿಗೊಳಿಸುತ್ತಾರೆ ಎಂಬುದರ ಬಗ್ಗೆ ದಾಖಲೆಗಳೊಂದಿಗೆ ಪರಿಶೀಲಿಸಿ, ಪ್ರಕರಣಗಳ ವಿವರ ಪಡೆದು ವಸೂಲಾತಿ ಮಾಡಬೇಕಾದ ಮೊತ್ತವನ್ನು ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಯಿಂದ ವಸೂಲಿ ಮಾಡಿ ಸರ್ಕಾರಕ್ಕೆ ಪಾವತಿಸಬೇಕು. ಅಡ್ -ಹಾಕ್ ಸಮಿತಿಯ ಸಭೆಯನ್ನು ಪ್ರತಿ ತಾಲೂಕಿನಲ್ಲಿ ಕಡ್ಡಾಯವಾಗಿ ನಿಯಮಿತವಾಗಿ ಆಯೋಜಿಸಿ ಪ್ರಕರಣಗಳನ್ನು ನಿಯಮಾನುಸಾರ ತಿರುವಳಿಗೊಳಿಸಬೇಕು. ಜಿಲ್ಲೆಯಲ್ಲಿ ಒಟ್ಟು 558 ಪ್ರಕರಣಗಳ ಬಗ್ಗೆ ತೆಗೆದುಕೊಂಡ ಕ್ರಮಗಳನ್ನು ಎಟಿಆರನಲ್ಲಿ ಅಳವಡಿಸಿ ಅಗತ್ಯ ಕ್ರಮ ಜರುಗಿಸಲು ಸಿಇಓ ಅವರು ಸೂಚಿಸಿದರು.
ಈಗಾಗಲೇ ಮಳೆಗಾಲ ಪ್ರಾರಂಭವಾಗಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಶುದ್ಧ ಕುಡಿಯುವ ನೀರಿನ ಘಟಕಗಳು ಚಾಲ್ತಿಯಲ್ಲಿರಬೇಕು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ
ದುರಸ್ಥಿ ಅಗತ್ಯವಿದೆ ಎಂದು ಕಂಡು ಬಂದಲ್ಲಿ ಕೂಡಲೇ ಕ್ರಮವಹಿಸಬೇಕು ಎಂದ ಸಿಇಓ ಅವರು, ಮಳೆಗಾಲದಲ್ಲಿ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ಕಾಪಾಡಲು ಪಿಡಿಓ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನೀರು ಕಲುಷಿತವಾಗದಂತೆ ಪ್ರತಿ ಗ್ರಾಮದಲ್ಲಿ ಮುಜಾಗ್ರತಾ ಕ್ರಮಗಳಾದ ಸ್ವಚ್ಛತೆ ಸೇರಿದಂತೆ ಇನ್ನೀತರ ಹೆಚ್ಚಿನ ಕಾಳಜಿ ವಹಿಸಬೇಕೆಂದು ಸಿಇಓ ಅವರು ನಿರ್ದೇಶನ ನೀಡಿದರು.
2024-25ನೇ ಸಾಲಿನ ಅನುಷ್ಠಾನಗೊಂಡ ಕಾಮಗಾರಿಗಳಿಗೆ ಸಾಮಾಜಿಕ ಲೆಕ್ಕ ಪರಿಶೋಧನೆ ಕಾರ್ಯವು ಜೂನ್ 02 ರಿಂದ ಪ್ರಾರಂಭವಾಗಿದ್ದು, ಸಾಮಾಜಿಕ ಪರಿಶೋಧನೆ ತಂಡವು ಆ ದಿನವೇ ನರೇಗಾ ಮತ್ತು 15ನೇ ಹಣಕಾಸು ಕಾಮಗಾರಿಗಳ ಕಡತಗಳು ಹಾಗೂ ಎಲ್ಲಾ ದಾಖಲಾತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಸೂಚಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಶರಣಬಸವರಾಜ ಕೆಸರಟ್ಟಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು (ಗ್ರಾ.ಉ), ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಎಡಿಪಿಸಿ, ಸಾಮಾಜಿಕ ಪರಿಶೋಧನೆ ಡಿ.ಪಿ.ಎಮ್, ತಾಂತ್ರಿಕ ಸಂಯೋಜಕರು ಹಾಗೂ ಇನ್ನೀತರ ಸಿಬ್ಬಂದಿ ಇದ್ದರು.