ಹುಬ್ಬಳ್ಳಿ: ಮಾಜಿ ಸಿಎಂ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಆಗುತ್ತಲೇ ಬಿಜೆಪಿ ಕಕ್ಕಾಬಿಕ್ಕಿ ಆಗಿದೆ. ಈಗಾಗಲೇ ಬಿಎಸ್‌ವೈ ರನ್ನು ನಡೆಸಿಕೊಂಡಿರುವ ರೀತಿಗೆ ಬಿಜೆಪಿಯ ಮೇಲೆ ಲಿಂಗಾಯತ ಸಮುದಾಯಕ್ಕೆ ಅಸಮಾಧಾನವಿದ್ದು, ಶೆಟ್ಟರ್ ವಿಚಾರದಲ್ಲಿ ಮುನಿಸು ಹೆಚ್ಚಾಗಿದೆ. ಇದನ್ನೆಲ್ಲ ಶಮನ ಮಾಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹುಬ್ಬಳ್ಳಿಗೆ ಆಗಮಿಸುತ್ತಾರೆ ಎನ್ನಲಾಗಿದೆ.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಆಗಿದ್ದರಿಂದ ಬಿಜೆಪಿಗೆ ಬೀಳಲಿದೆ ಬಹು ದೊಡ್ಡ ಹೊಡೆತ ಬೀಳಲಿದೆ ಎಂದು ಪಕ್ಷ ಅಂದಾಜಿಸಿದ್ದು, ಉತ್ತರ ಕರ್ನಾಟಕದ ಪ್ರತಿಯೊಂದು ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಪಕ್ಷ ತೊರೆದಿದ್ದರ ಪರಿಣಾಮ ಬೀರಲಿದೆ ಎಂದು ಆತಂಕಗೊಂಡಿದೆ.
ಇದನ್ನು ನಿಭಾಯಿಸಲು ರಾಷ್ಟ್ರೀಯ ಅಧ್ಯಕ್ಷರನ್ನೇ ಕರೆತರಲು ಬಿಜೆಪಿ ನಾಯಕರು ಮುಂದಾಗಿದ್ದು, ನಾಳೆ ಸಂಜೆ ಜೆಪಿ ನಡ್ಡಾ ಹುಬ್ಬಳ್ಳಿಗೆ ತಲುಪಲಿದ್ದಾರೆ. ಎರಡೂ ದಿನಗಳ ಕಾಲ ಹುಬ್ಬಳ್ಳಿಯಲ್ಲಿಯೇ ಬೀಡು ಬಿಡಲಿರುವ ಜೆಪಿ ನಡ್ಡಾ ಡ್ಯಾಮೇಜ್ ಕಂಟ್ರೋಲ್ ಮಾಡಲು ಪ್ರಯತ್ನಿಸಲಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ನಡೆಯುವ ಎರಡೂ ಕಾರ್ಯಕ್ರಮದಲ್ಲಿ ನಡ್ಡಾ ಭಾಗಿಯಾಗಲಿದ್ದು, ಶೆಟ್ಟರ್ ಸ್ಪರ್ಧೆ ಮಾಡುವ ಸೆಂಟ್ರಲ್ ಕ್ಷೇತ್ರದಲ್ಲಿಯೇ ಕಾರ್ಯಾಚರಣೆ ಆರಂಭಿಸಲಿದ್ದಾರೆ.
ಶೆಟ್ಟರ್ ಗೆ ಯಾರೂ ಬೆಂಬಲ ಕೊಡಬಾರದೆಂದು ಪಕ್ಷದ ಸ್ಥಳೀಯ ನಾಯಕರಿಗೆ ಜೆಪಿ ನಡ್ಡಾ ಸೂಚನೆ ನೀಡಲಿದ್ದು, ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಜೊತೆಗೆ ಸಂವಾದ ನಡೆಸಲಿದ್ದಾರೆ. ಅದರ ನಂತರದ ದಿನ ಮೂರು ಸಾವಿರ ಮಠ, ಸಿದ್ದಾರೂಡರ ಮಠಕ್ಕೆ ಭೇಟಿ ನೀಡಿ ಮಠಾಧೀಶರ ಮನವೊಲಿಸುವ ಕಾರ್ಯದಲ್ಲಿ ನಡ್ಡಾ ತೊಡಗಲಿದ್ದಾರೆ.