Tuesday, July 8, 2025
Homeಟಾಪ್ ನ್ಯೂಸ್ಕಾಂಗ್ರೆಸ್‌ನಲ್ಲಿ ಶುರುವಾಯ್ತು ಬಿಕ್ಕಟ್ಟು: ದೇವನಹಳ್ಳಿಯಲ್ಲಿ ಸಾಮೂಹಿಕ ರಾಜಿನಾಮೆ

ಕಾಂಗ್ರೆಸ್‌ನಲ್ಲಿ ಶುರುವಾಯ್ತು ಬಿಕ್ಕಟ್ಟು: ದೇವನಹಳ್ಳಿಯಲ್ಲಿ ಸಾಮೂಹಿಕ ರಾಜಿನಾಮೆ

ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್‌ ವರಿಷ್ಠರಿಗೆ ಕ್ಷೇತ್ರಗಳ ಸಮಸ್ಯೆ  ತಲೆನೋವಾಗಿ ಪರಿಣಮಿಸಿದೆ. ಒಂದು ಕಡೆ ಸಿದ್ದರಾಮಯ್ಯ ಅವರ ಕ್ಷೇತ್ರ ಇನ್ನೂ ಅಂತಿಮಗೊಳ್ಳದೆ ಗೊಂದಲ ಮುಂದುವರೆದಿರುವ ನಡುವೆ, ಕೋಲಾರದ ಮಾಜಿ ಸಂಸದ ಕೆ ಎಚ್‌ ಮುನಿಯಪ್ಪ ಬೆಂಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಿಂದ ಟಿಕೆಟ್‌ಗಾಗಿ ಟವೆಲ್‌ ಬೀಸಿದ್ದಾರೆ.

ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವ ಒಲವು ವ್ಯಕ್ತಪಡಿಸಿದಂತೆ, ಕೆ.ಎಚ್‌. ಮುನಿಯಪ್ಪ ದೇವನಹಳ್ಳಿ ಕ್ಷೇತ್ರದ ಮೂಲಕ ರಾಜ್ಯ ರಾಜಕಾರಣಕ್ಕೆ ಮರಳಲು ಪ್ರಯತ್ನ ಪಡುತ್ತಿದ್ದಾರೆ.

ಇದು, ದೇವನಹಳ್ಳಿ ಕ್ಷೇತ್ರದ ಸ್ಥಳೀಯ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.  ಕೆ.ಹೆಚ್​​.ಮುನಿಯಪ್ಪ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಬಾರದೆಂಬ ಕೂಗು ಬಲವಾಗಿ ಎದ್ದಿದೆ. ದೇವನಹಳ್ಳಿ ಟಿಕೆಟ್‌ ಸ್ಥಳೀಯರಿಗೆ ನೀಡಬೇಕೆಂದು ಮುಖಂಡರು ಪಟ್ಟು ಹಿಡಿದಿದ್ದು, ಮುನಿಯಪ್ಪ ಸ್ಪರ್ಧೆ ವಿರೋಧಿಸಿ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

 

ಕೆ.ಹೆಚ್ ಮುನಿಯಪ್ಪಗೆ ಟಿಕೆಟ್​ ನೀಡಿದಲ್ಲಿ ಕ್ಷೇತ್ರದಲ್ಲಿ ಪಕ್ಷ ಸೋಲುವ ಸಾಧ್ಯತೆ ಹೆಚ್ಚಿದ್ದು, ಎಡಗೈ ಸಮುದಾಯದ‌ ಮತ ವಿಂಗಡನೆ ಆಗುವ ಸಾಧ್ಯತೆ ದಟ್ಟವಾಗಿದೆ. ಸ್ಥಳೀಯ ಟಿಕೆಟ್​ ಆಕಾಂಕ್ಷಿಗಳು ಕೆಲವು ವರ್ಷಗಳಿಂದ ಕೆಲಸ ಮಾಡುತ್ತಲೇ ಬಂದಿದ್ದು, ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದವರಿಗೆ ಟಿಕೆಟ್‌ ನೀಡಬೇಕೆಂಬ ಕೂಗು ಕೈ ಪಾಳೆಯದಿಂದಲೇ ಕೇಳಿ ಬಂದಿದೆ.

ದಲಿತ ಮೀಸಲು ಕ್ಷೇತ್ರವಾದ ದೇವನಹಳ್ಳಿಯಲ್ಲಿ ಕಳೆದ ಕೆಲವು ಅವಧಿಯಲ್ಲಿ ಜೆಡಿಎಸ್‌ ಪ್ರಬಲವಾಗಿದ್ದು, ರಾಜ್ಯ ಮಟ್ಟದ ನಾಯಕ ಯಾರದಾರೂ ಅಖಾಡಕ್ಕಿಳಿದರೆ ಜೆಡಿಎಸ್‌ಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಆದರೆ, ಈಗಾಗಲೇ 6 ಮಂದಿ ಸ್ಥಳೀಯರು ಟಿಕೆಟ್‌ ಗಾಗಿ ಲಾಬಿ ನಡೆಸುತ್ತಿದ್ದು, ಹೊರಗಿನ ಅಭ್ಯರ್ಥಿಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಹೆಚ್ಚಿನ ಸುದ್ದಿ