ಅಥಣಿಯಲ್ಲಿ ಲಕ್ಷ್ಮಣ್ ಸವದಿಗೆ ಬಿಜೆಪಿ ಟಿಕೆಟ್ ತಪ್ಪಲು ಪ್ರಮುಖ ಕಾರಣವಾಗಿದ್ದಾರೆ ಎನ್ನಲಾದ ರಮೇಶ್ ಜಾರಕಿಹೊಳಿ ಇದೀಗ ಸವದಿಗೆ ಸಲಹೆ ನೀಡಲು ಮುಂದೆ ಬಂದಿದ್ದಾರೆ. ಲಕ್ಷ್ಮಣ ಸವದಿ ತಮ್ಮ ನಿರ್ಧಾರ ಇನ್ನೊಮ್ಮೆ ಪರಿಶೀಲನೆ ಮಾಡಲು. ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಪಕ್ಷ ಬಿಡಬಾರದು ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ.
‘ನಾನು, ಲಕ್ಷ್ಮಣ ನಿಜವಾಗಿ ಒಳ್ಳೆಯ ಗೆಳೆಯರು. ಯಾವುದೋ ಕೆಟ್ಟ ಘಳಿಗೆಯಲ್ಲಿ ಬೇರೆಬೇರೆ ಆದೆವು. ಕಾಂಗ್ರೆಸ್ ಬಗ್ಗೆ ನನಗೆ ಗೊತ್ತು. ಅದು ಮೋಸದ ಪಕ್ಷ. ಬಿಜೆಪಿ ಬಿಟ್ಟು ಅಂಥ ಪಕ್ಷ ಸೇರಬಾರದು’ ಎಂದು ಜಾರಕಿಹೊಳಿ ಸಲಹೆ ನೀಡಿದ್ದಾರೆ.
‘ನಾವಿಬ್ಬರೂ ಸೇರಿ ಈ ಬಾರಿ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸೋಣ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸೋಣ. ಇಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಕುಳಿತು ಮಾತಾಡೋಣ. ಆದರೆ, ಪಕ್ಷ ಬಿಟ್ಟು ಹೋಗುವುದು ಬೇಡ ಎಂದು ಜಾರಕಿಹೊಳಿ ಕರೆ ಕೊಟ್ಟಿದ್ದಾರೆ.
ಮಹೇಶ್ ಕುಮಠಳ್ಳಿ ಪರ ಬ್ಯಾಟಿಂಗ್ ಮಾಡಿದ್ದನ್ನು ಸಮರ್ಥಿಸಿದ ಜಾರಕಿಹೊಳಿ, ಮಹೇಶ ಕುಮಠಳ್ಳಿ ಪರವಾಗಿ ಬ್ಯಾಟಿಂಗ್ ಮಾಡುವುದು ನನ್ನ ಧರ್ಮ. ಆದರೆ, ಲಕ್ಷ್ಮಣ ಸವದಿಯ ಸ್ಥಾನ ಕಸಿದುಕೊಂಡಿಲ್ಲ. ಈಗ ನೀನು ವಿಧಾನ ಪರಿಷತ್ ಸದಸ್ಯ. ಇನ್ನೂ ಐದು ವರ್ಷ ಅಧಿಕಾರ ಅವಧಿ ಇದೆ. ವಿಚಾರ ಮಾಡು’ ಎಂದು ಸವದಿಗೆ ಕಿವಿಮಾತು ಹೇಳಿದ್ದಾರೆ.