Tuesday, July 8, 2025
Homeಚುನಾವಣೆ 2023ಬಿಜೆಪಿಗೆ ವಿದಾಯ.. ಇಂದು ಕಾಂಗ್ರೆಸ್ ಸೇರುತ್ತಾರಾ ಸವದಿ?

ಬಿಜೆಪಿಗೆ ವಿದಾಯ.. ಇಂದು ಕಾಂಗ್ರೆಸ್ ಸೇರುತ್ತಾರಾ ಸವದಿ?

ಬೆಳಗಾವಿ: ಗುರುವಾರ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬೆಳಗಾವಿಯಿಂದ ಬೆಂಗಳೂರಿಗೆ ಹೊರಟಿದ್ದು, ಇಂದು ಕಾಂಗ್ರೆಸ್ ಸೇರ್ಪಡೆಯಾಗುವುದು ಬಹುತೇಕ ಫಿಕ್ಸ್ ಆಗಿದೆ.

ಇಂದು ಬೆಳ್ಳಂ ಬೆಳಗ್ಗೆ ಬೆಳಗಾವಿಯಿಂದ ಬೆಂಗಳೂರಿಗೆ ಹೊರಟ ಲಕ್ಷ್ಮಣ ಸವದಿ, ಸಾಂಬ್ರಾ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳಸಿದ್ದಾರೆ. ಸವದಿ ಅವರೊಂದಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಎಂ.ಎಲ್.ಸಿ ಚನ್ನರಾಜ್ ಹಟ್ಟಿಹೊಳಿ ಅವರೂ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರಿನಲ್ಲಿ ವಿಶೇಷ ವಿಮಾನ ಬುಕ್‌ ಆಗಿದೆ ಎನ್ನಾಲಾಗಿದೆ. ಮಧ್ಯಾಹ್ನ ಕೆಪಿಸಿಸಿ ಕಚೇರಿಯಲ್ಲಿ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಗುರುವಾರ ಅಥಣಿಯಲ್ಲಿ ಮಾತನಾಡಿದ ಸವದಿ, ಅನೇಕ ಮುಖಂಡರು ನನ್ನನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಬೇಸರವಾಗಿದೆ. ನನಗೆ ಆಂತರಿಕವಾಗಿ ಬಹಳಷ್ಟು ನೋವು ಮತ್ತು ಹಿಂಸೆ ಆಗಿದೆ. ಆದರೂ ಪಕ್ಷ ನನ್ನ ತಾಯಿ ಎಂದು ಸುಮ್ಮನಿದ್ದೆ. ರಾಷ್ಟ್ರೀಯ ನಾಯಕರು ಬಂದಾಗ ವೇದಿಕೆ ಹಂಚಿಕೊಳ್ಳಲೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾವುದೆ ಸೂಚನೆ ನೀಡದೆ ಉಪಮುಖ್ಯಮಂತ್ರಿ ಸ್ಥಾನದಿಂದ ತೆಗೆದರೂ ಸುಮ್ಮನಿದ್ದೆ. ಯಾವತ್ತೂ ಪಕ್ಷ ವಿರೋಧಿ ಚಟುವಟಿಕೆ, ಟೀಕೆ ಟಿಪ್ಪಣಿ ಮಾಡಿಲ್ಲ. ಆದಾಗ್ಯೂ ಕಡೆಗಣಿಸಿರುವುದು ಬೇಸರ ತಂದಿದೆ. ಹೀಗಾಗಿ ಪಕ್ಷದಿಂದ ಹೊರ ಹೋಗಲು ತೀರ್ಮಾನ ಮಾಡಿದ್ದೇನೆ ಎಂದು ಸವದಿ ಹೇಳಿದ್ದಾರೆ.

ವಿಧಾನಪರಿಷತ್​ ಸದಸ್ಯ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡುತ್ತೇನೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುವೆ. ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ವಿಧಾನಪರಿಷತ್ ಸಭಾಪತಿಗೆ ಈಗಾಗಲೇ ಸಮಯ ಕೇಳಿದ್ದೇನೆ. ಶುಕ್ರವಾರ ಮಧ್ಯಾಹ್ನ ಭೇಟಿಯಾಗಲು ಸಭಾಪತಿ ಸಮಯ ಕೊಟ್ಟಿದ್ದಾರೆ ಎಂದು ತಿಳಿಸಿದ್ದರು.

ಹೆಚ್ಚಿನ ಸುದ್ದಿ