ಬೆಳಗಾವಿ: ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ಸಮೀಪದ ಧುಪದಾಳ ಜಲಾಶಯದಲ್ಲಿ ಈಜಲು ನೀರಿಗೆ ಇಳಿದಿದ್ದ ಆರು ಮಂದಿ ಯುವಕರಲ್ಲಿ ನಾಲ್ವರು ಸಾವನ್ನಪ್ಪಿದ್ದು, ಒಬ್ಬನ ಸ್ಥಿತಿ ಗಂಭೀರ ಮತ್ತೊಬ್ಬ ಯುವಕ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ.
ಸಂತೋಷ್ ಬಾಬು ಈಡಗ (19), ಅಜಯ ಬಾಬು ಜೋರೆ (19), ಕೃಷ್ಣ ಬಾಬು ಜೋರೆ (20), ಆನಂದ ವಿಟ್ಟು ಕೋಕಡೆ (20) ಮೃತಪಟ್ಟ ಯುವಕರಾಗಿದ್ದು. ರಾಮಚಂದ್ರ ಕೋಕಡೆ (20) ಎನ್ನುವ ಯವಕನ ಸ್ಥಿತಿ ಗಂಭೀರವಾಗಿದೆ. ಹಾಗೆ ವಿಠ್ಠಲ್ ಜಾನು ಕೋಕಡೆ (20) ಎನ್ನುವ ಯುವಕ ಪ್ರಾಣಾಪಾಯದಿಂದ ಬದುಕುಳಿದಿದ್ದಾನೆ.
ರಜೆ ಇದ್ದ ಕಾರಣ ಯುವಕರೆಲ್ಲ ಪ್ರವಾಸಕ್ಕೆ ತೆರಳಿದ್ದರು. ಆದ್ರೆ ಎಲ್ಲರಿಗೂ ಈಜು ಬರುತ್ತಿದ್ದ ಕಾರಣ ಜಲಾಶಯಕ್ಕೆ ಇಳಿದಿದ್ದಾರೆ. ಈಜುವಾಗಲೇ ಯುವಕರು ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದು, ಸದ್ಯ ಮೃತ ಯುವಕರ ಮೃತದೇಹವನ್ನ ಘಟಪ್ರಭಾ ಕೆಎಚ್‌ಐ ಆಸ್ಪತ್ರೆಯಲ್ಲಿ ಇರಿಸಲಾಗಿದೆ.