ಬೆಂಗಳೂರು: ನಿರುದ್ಯೋಗಿ ಯುವಕರಿಗೆ ಉದ್ಯೋಗದ ಆಮಿಷ ತೋರಿಸಿ ವಂಚಿಸಲಾಗುತ್ತಿದೆ ಎಂಬ ಆರೋಪದ ಮೇಲೆ ಫ್ರೀಡಂ ಆಪ್ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಂಚನೆಗೊಳಗಾಗಿರುವ 20 ಕ್ಕೂ ಹೆಚ್ಚು ಮಂದಿ ನೀಡಿರುವ ದೂರಿನನ್ವಯ ಪೊಲೀಸರು ಸಂಸ್ಥೆಯ ಸಿಇಒ ಸಿ.ಎಸ್.ಸುಧೀರ್ ಅವರನ್ನು ತನಿಖೆಗೆ ಒಳಪಡಿಸಿದ್ದಾರೆ.
ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ಸುಧೀರ್ ನಿರೀಕ್ಷಣಾ ಜಾಮೀನು ಪಡೆದು ಸಧ್ಯಕ್ಕೆ ಬಂಧನ ಭೀತಿಯಿಂದ ಮುಕ್ತರಾಗಿದ್ದಾರೆ. ಆದರೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿ ಕರೆಸಿಕೊಂಡಿದ್ದರು.
ಪಾರ್ಟ್ ಟೈಮ್ ಕೆಲಸ ನೀಡುವ ಆಮಿಷ ಒಡ್ಡುತ್ತಿದ್ದ ಫ್ರೀಡಂ ಆಪ್ ೧೫ ಸಾವಿರ ರೂ. ವೇತನ ನೀಡುವುದಾಗಿ ಹೇಳಿ ಸುಮಾರು ಮಂದಿಯಿಂದ ದುಡಿಸಿಕೊಂಡಿತ್ತು. ಯುವಕರು ಸಾವಿರಾರು ಜನರನ್ನು ಆಪ್‌ಗೆ ಚಂದಾದಾರರನ್ನಾಗಿಸಿದ್ದರು. ಬಳಿಕ ಸುಧೀರ್ ಹಣ ಕೊಡದೆ ಸತಾಯಿಸುತ್ತಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
