ಬಿಜೆಪಿ ಟಿಕೆಟ್ ಘೋಷಣೆಯಾಗಿದ್ದು, ಹಲವಾರು ಹಾಲಿ ಶಾಸಕರಿಗೆ ಹಾಗೂ ಮೂಲ ಬಿಜೆಪಿಗರಿಗೆ ಟಿಕೆಟ್ ಕೈ ತಪ್ಪಿದೆ. ಪಕ್ಷದೊಳಗೆ ಎದ್ದಿರುವ ಆಂತರಿಕ ಭಿನ್ನಮತದ ಲಾಭವನ್ನು ಪಡೆಯಲು ಪ್ರತಿಪಕ್ಷ ಹವಣಿಸುತ್ತಿದೆ. ಬೆಳಗಾವಿಯ ಬಿಜಪಿ ಭಿನ್ನಮತೀಯರನ್ನು ಸೆಳೆಯಲು ಹೆಚ್‌ಡಿ ಕುಮಾರಸ್ವಾಮಿ ಕಸರತ್ತು ಮಾಡುತ್ತಿದ್ದಾರೆ.
ಉತ್ತರ ಕರ್ನಾಟಕ ಮತ್ತು ಮಲೆನಾಡು ಭಾಗದ ಹಲವು ನಾಯಕರನ್ನು ಸಂಪರ್ಕಿಸಿರುವ ಕುಮಾರಸ್ವಾಮಿ, ಬೆಳಗಾವಿಯ ಪ್ರಬಲ ನಾಯಕ ಲಕ್ಷ್ಮಣ್ ಸವದಿಗೆ ಗಾಳ ಹಾಕಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿ ಟಿಕೆಟ್ ಕೈ ತಪ್ಪುತ್ತಿದ್ದಂತೆ ಸವದಿಯನ್ನು ಹೆಚ್‌ಡಿಕೆ ಸಂಪರ್ಕ ಮಾಡಿದ್ದಾರೆ. ಆಪ್ತರ ಮೂಲಕ ಸವದಿಯನ್ನು ಸೆಳೆಯಲು ಕಸರತ್ತು ನಡೆಸಿದ್ದಾರೆ. ಈ ಬಾರಿ ನಾವೇ ಸರ್ಕಾರ ರಚನೆಯನ್ನ ಮಾಡಲಿದ್ದು, ಸರ್ಕಾರದಲ್ಲಿ ಉತ್ತಮ ಸ್ಥಾನಮಾನ ನೀಡುವುದಾಗಿ ಹೆಚ್‌ಡಿಕೆ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಬೆಳಗಾವಿಯ ಅಥಣಿ ಕ್ಷೇತ್ರಕ್ಕೆ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕೂಡಾ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ರಮೇಶ್ ಜಾರಕಿಹೊಳಿ ಪ್ರಭಾವದಿಂದ ಮಹೇಶ್ ಕುಮಠಳ್ಳಿಗೆ ಬಿಜೆಪಿ ಟಿಕೆಟ್ ಹೋಗಿದೆ. ಇದು ಸವದಿ ಅಸಮಾಧಾನಕ್ಕೆ ಕಾರಣವಾಗಿದೆ.